ಬೆಂಗಳೂರು : ರಾಜಸ್ಥಾನದಿಂದ ಕಲಬೆರಕೆ ಮಾಂಸ ಸಾಗಾಟ ಆರೋಪ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಪ್ರಕರಣದಲ್ಲಿ ಬಂಧಿತರಾಗಿದ್ದ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿಗೆ 5ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಪುನೀತ್ ಕೆರೇಹಳ್ಳಿಗೆ ಷರತ್ತು ಬದ್ಧ ಜಾಮೀನು ನೀಡಿದೆ.ಬಿಡುಗಡೆ ಬಳಿಕ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಜೊತೆಗೆ ಮುಂದೆ ಇಂತಹದ್ದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು.
ಪ್ರತಿ ತಿಂಗಳ ಮೊದಲ ಭಾನುವಾರದಂದು ಠಾಣೆಗೆ ಹಾಜರಾಗಿ ಸಹಿ ಮಾಡಬೇಕು, ವಿಚಾರಣೆ ಮುಗಿಯುವವರೆಗೂ ದೇಶಬಿಟ್ಟು ಹೋಗಬಾರದು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ ಕೋರ್ಟ್. ಪುನೀತ್ ಕೆರೆಹಳ್ಳಿ ಪರ ವಕೀಲ ಪ್ರಕಾಶ್ ಶೆಟ್ಟಿ ವಾದಿಸಿದರು.
ಪ್ರಕರಣದ ಹಿನ್ನೆಲೆ ಏನು?
ರಾಜಸ್ಥಾನದ ಶಿಖರ್ ಜಿಲ್ಲೆಯಲ್ಲಿರುವ ಗೋಡೌನ್ನಿಂದ ಮಾಂಸದ ಬಾಕ್ಸ್ಗಳು ಜೈಪುರ ರೈಲ್ವೆ ನಿಲ್ದಾಣಕ್ಕೆ ಅಲ್ಲಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿತ್ತು. ಹೀಗೆ ತರುವ ಮಾಂಸದ ಬಾಕ್ಸ್ಗಳಲ್ಲಿ ಮಟನ್ ಜೊತೆಗೆ ನಾಯಿ ಮಾಂಸ ಬೆರೆಸಲಾಗಿದೆ ಎಂಬ ಸುದ್ದಿ ಕಾಟನ್ ಪೇಟೆ ಠಾಣಾ ವ್ಯಾಪ್ತಿಯ ಹೊಯ್ಸಳ ೩೭ ಕ್ಕೆ ಕರೆ ಮಾಡಲಾಗಿತ್ತು. ಹೊಯ್ಸಳ ಸಿಬ್ಬಂದಿ ರೈಲ್ವೇ ನಿಲ್ದಾಣದ ಹಿಂಬದಿ ಗೇಟ್ ಗೆ ಹೋಗಿ ಪೊಲೀರು ಪರಿಶೀಲನೆ ನಡೆಸಿದ್ದರು.
ಹಿಂದೂಪರ ಸಂಘಟನೆ ಮುಖಂಡ ಪುನೀತ್ ಕೆರೆ ಹಳ್ಳಿ ಹಾಗೂ ಸಂಗಡಿಗರು ರೈಲ್ವೆ ನಿಲ್ದಾಣಕ್ಕೆ ಬಂದು ಐಸ್ ಬಾಕ್ಸ್ ಹಿಡಿದುಕೊಂಡು ಸೇವಿಸಲು ಯೋಗ್ಯವಲ್ಲದ ನಾಯಿ ಮಾಂಸದ ದಂಧೆಯನ್ನ ಅಬ್ದುಲ್ ರಜಾಕ್ ನಡೆಸುತ್ತಿದ್ದಾರೆಂದು ಘೋಷಣೆ ಕೂಗಿದ್ದರು. ಈ ವೇಳೆ ವಾಗ್ವಾದ ನಡೆದು ಗಲಾಟೆಯಾಗಿತ್ತು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.