ತುಮಕೂರು : ಇನ್ಸ್ಟಾಗ್ರಾಮ್ ನಲ್ಲಿ ತನ್ನ ಮಾಜಿ ಪ್ರಿಯಕರನ ಪರಿಚಯ ವಾಗಿದ್ದೇ ತಡ ಪತ್ನಿಯೊಬ್ಬಳು ಸುಪಾರಿ ನೀಡಿ ಪ್ರೀತಿಸಿ ಮದುವೆಯಾಗಿದ್ದ ಗಂಡನನ್ನೇ ಕೊಲೆ ಮಾಡಿಸಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮಲ್ಲೆಕಾವು ಗ್ರಾಮದ ಬಳಿ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಪ್ರಕಾಶ್ (30) ಕೊಲೆಯಾದ ದುರ್ದೈವಿಯಾಗಿದ್ದು, ಹರ್ಷಿತ (28) ಗಂಡನನ್ನು ಕೊಲೆ ಮಾಡಿಸಿದ ಹೆಂಡತಿ ಎಂದು ತಿಳಿದುಬಂದಿದೆ. ಕೊಲೆಯಾದ ಪ್ರಕಾಶ್ 3 ವರ್ಷದ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ನಂತರ ಹರ್ಷಿತ ಪ್ರಕಾಶ್ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಪ್ರಕಾಶ ಹೆಂಡತಿಯ ಮನೆಯಲ್ಲಿ ವಾಸವಿದ್ದ.ಅವರಿಗೆ ಒಂದೂವರೆ ವರ್ಷದ ಮಗು ಕೂಡ ಇತ್ತು.
ಆದ್ರೆ ಇತ್ತೀಚಿಗೆ ಹರ್ಷಿತಾಳಿಗೆ ಇನ್ ಸ್ಟಾಗ್ರಾಂನಲ್ಲಿ ಮಾಜಿ ಪ್ರಿಯತಮ ಗುಂಡ ಸಿಕ್ಕಿದ್ದನು. ಈ ವೇಳೆ ಹರ್ಷಿತಾ ಮತ್ತು ಗುಂಡ ಇಬ್ಬರಿಗೂ ಮರು ಪ್ರೇಮಾಂಕುರವಾಗಿದೆ. ಕಳೆದ 2 ತಿಂಗಳ ಹಿಂದೆ ಹರ್ಷಿತಾ ಮನೆಬಿಟ್ಟು ಗುಂಡನ ಜೊತೆ ಪರಾರಿಯಾಗಿದ್ದಳು. ಈ ಸಂಬಂಧ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಬಳಿಕ ಹರ್ಷಿತಾ ಮನೆಗೆ ವಾಪಾಸ್ಸಾಗಿದ್ದಳು.
ದುರಂತವೆಂದರೆ ಗಂಡನ ಕೊಲೆಗಾಗಿ ಹರ್ಷಿತಾ ಸಹೋದರ ಸೋಮಶೇಖರ್ ಹಾಗೂ ಪ್ರಿಯತಮ ಗುಂಡನಿಗೆ ಸುಪಾರಿ ನೀಡಿದ್ದಳು. ಇದರಂತೆ ಸೋಮಶೇಖರ್ ನಂಬಿಸಿ ಪ್ರಕಾಶ್ ನನ್ನ ಕರೆಸಿಕೊಂಡಿದ್ದನು. ಪ್ರಕಾಶ್ ಮೇಲೆ ಡ್ರ್ಯಾಗರ್ ನಿಂದ ಎದೆಭಾಗಕ್ಕೆ ಚುಚ್ಚಿ ಪಾಪಿಗಳು ಕೊಲೆ ಮಾಡಿದ್ದಾರೆ.
ಬಳಿಕ ಅಪಘಾತದ ರೀತಿಯಲ್ಲಿ ಬಿಂಬಿಸಲು ಆರೋಪಿಗಳು ಹೊರಟಿದ್ದರು. ಆದ್ರೆ ಎದೆಭಾಗಕ್ಕೆ ಚುಚ್ಚಿದ ಗಾಯ ಪತ್ತೆ ಹಿನ್ನೆಲೆಯಲ್ಲಿ ಇದು ಕೊಲೆ ಎಂದು ಖಚಿತವಾಗಿದೆ. ಸದ್ಯ ಕೊರಟಗೆರೆ ಪೊಲೀಸರಿಂದ ಹರ್ಷಿತಾ, ಸೋಮಶೇಖರ್, ರಂಗಸ್ವಾಮಯ್ಯನನ್ನ ಬಂಧನವಾಗಿದೆ. ಗುಂಡನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.