ಯಾದಗಿರಿ : ಅನ್ನಭಾಗ್ಯ ಅಕ್ಕಿ ನಾಪತ್ತೆ ಕೇಸ್ ನಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಬಂಧನವಾಗಿದೆ. ಸೋಮವಾರ ಮಣಿಕಂಠ ರಾಠೋಡ್ ಅವರ ಭೇಟಿಗೆ ಆಗಮಿಸಿದ ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಶಹಾಪುರ ಪೊಲೀಸರು ಭೇಟಿ ನಿರಾಕರಿಸಿದ್ದಾರೆ. ಇದಕ್ಕೆ ಅಸಮಾಧಾನ ಹೊರ ಹಾಕಿದ ಮುತಾಲಿಕ್ ಪ್ರಿಯಾಂಕ್ ಖರ್ಗೆ ಅವರೇ ಚಿಲ್ಲರೆ ಕೆಲಸ ಮಾಡಬೇಡಿ ಎಂದು ಕಿಡಿ ಕಾರಿದರು.
ಮಣಿಕಂಠ ರಾಠೋಡ್ ಶಹಾಪುರ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿದ್ದಾರೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಮಣಿಕಂಠ ರಾಠೋಢ್, ಪ್ರಿಯಾಂಕ್ ಖರ್ಗೆ ವಿರುದ್ಧ 68 ಸಾವಿರ ಮತ ಪಡೆದುಕೊಂಡಿದ್ದರು. ‘ಶಹಾಪುರ ಪೊಲೀಸರು ಬಂಧನ ಮಾಡಿರುವ ವ್ಯಕ್ತಿಗೆ ಭೇಟಿಗೆ ಬಂದಿದ್ದೇನೆ. ಇದು ಒಂದು ಸೌರ್ಹಾದಯುತ ಭೇಟಿ, ಆರೋಗ್ಯ ಹೇಗಿದೆ ಎಂದು ಕೇಳಲು ಬಂದಿದ್ದೇನೆ. ಆದರೆ ಅದಕ್ಕೆ ಪೊಲೀಸರು ಅವಕಾಶ ಕೊಡ್ತಿಲ್ಲ ಎಂದರು.
ಈ ರೀತಿ ದಾದಾಗಿರಿ ತುಘಲಕ್ ದರ್ಬಾರ್ ಬಹಳ ದಿನ ನಡೆಯೋಲ್ಲ. ಮಣಿಕಂಠ ರಾಠೋಡ್ ಬಂಧನ ಅಕ್ರಮವಿದೆ, ಕಾನೂನು ಬಾಹಿರವಿದೆ. ಅವರ ಮೇಲಿನ ಆರೋಪಕ್ಕೆ ಸಂಬಂದಪಟ್ಟ ಲೆಟರ್ ನನ್ನ ಬಳಿಯಿದೆ. ಅವರ ತಮ್ಮನ್ನ ಹೆಸರಿನಲ್ಲಿರುವ ಗೋದಾಮಿನ ಹೆಸರಿದೆ. ಈಗಾಗಲೇ ಅವರ ತಮ್ಮನನ್ನ ಬಂಧಿಸಿ, ಅಕ್ಕಿ ವಶ ಪಡಿಸಿಕೊಳ್ಳಲಾಗಿದೆ. ಅದರಲ್ಲಿ ಮಣಿಕಂಠ ರಾಠೋಡ್ ಹೆಸರಿಲ್ಲ, ಯಾವುದೇ ದಾಖಲೆ ಇಲ್ಲ. ಅಯ್ಯಪ್ಪದಾಸ್ ಹೆಸರಿನ ತಮ್ಮನ ಗೋದಾಮಿನಲ್ಲೂ ಏನೂ ಹೆಸರಿಲ್ಲ. ಮುಂಬೈ ಮೂಲದ ವ್ಯಕ್ತಿಗೆ ಲೀಜ್ ಕೊಟ್ಟಿದ್ರಲ್ಲೂ ರಾಠೋಡ್ ಹೆಸರಿಲ್ಲ ಎಂದು ಹೇಳಿದ್ದಾರೆ.
ಟೆರರಿಸ್ಟ್ ಗಳಿಗೆ ಎಷ್ಟು ಜನರಿಗೆ ಭೇಟಿ ಕೊಟ್ಟಿದ್ದೇವೆ ದಾಖಲೆ ಬೇಕಾ ನಿಮಗೆ. ಹಿಂಸೆ ಕೊಟ್ಟು ಮಾನಸಿಕವಾಗಿ, ದೈಹಿಕವಾಗಿ ತುಳಿಯುವಂತ ಕೆಲಸ ಮಾಡ್ತಿರುವದು ನಿಮಗೆ ಶೋಭೆ ತರುವುದಿಲ್ಲ ಪ್ರಿಯಾಂಕ್ ಖರ್ಗೆ ಅವರೇ. ನೀವು ಉಸ್ತುವಾರಿ ಮಂತ್ರಿ ಇದ್ದೀರಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ. ಪ್ರಿಯಾಂಕ್ ಖರ್ಗೆ ಅವರೇ ನೀವು ಇಷ್ಟು ಚಿಲ್ಲರೆ ಕೆಲಸ ಮಾಡಬಾರದು. ಸುಪ್ರೀಂ ಕೋರ್ಟ್ ವರೆಗೆ ಹೋಗುತ್ತೇವೆ. ಯಾಕೆ ಬಂಧನ ಮಾಡಿದ್ದಾರೆ ಅನ್ನೋದು ಹೇಳೋವರೆಗೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.