ಬೆಳಗಾವಿ : ರಾಜ್ಯದಲ್ಲಿ ರಣಭೀಕರ ಮಳೆಯಾಗುತ್ತಿದ್ದು ಎಲ್ಲೆಡೆ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗುತ್ತಿವೆ. ಇದರಿಂದ ಸಾವು ನೋವುಗಳು ಸಂಭವಿಸುತ್ತಿವೆ. ಇದೀಗ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ, ಗ್ರಾಮಸ್ಥರು ಶವವನ್ನು 6 ಕಿ.ಮೀ ವರೆಗೂ ಹೊತ್ತುಕೊಂಡು ಸಾಗಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕೃಷ್ಣಪುರದಲ್ಲಿ ನಡೆದಿದೆ.
ಹೌದು ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಖಾನಾಪುರದ ಭೀಮಗಡ ಅಭಯಾರಣ್ಯದಲ್ಲಿರುವ ಕೃಷ್ಣಾಪುರ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಗ್ರಾಮದ ಸದಾನಂದ ನಾಯಕ ಎಂಬವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ ಚಿಕಿತ್ಸೆಗಾಗಿ ಪಕ್ಕದ ವಾಳ್ಪೈ ಗ್ರಾಮಕ್ಕೆ ಕುಟುಂಬದವರು ಕರೆದೊಯ್ದಿದ್ದರು.
ಆದರೆ, ಆಸ್ಪತ್ರೆಯಲ್ಲಿ ಸದಾನಂದ ನಾಯಕ ಮೃತಪಟ್ಟಿದ್ದರು. ನಂತರ, ಅಂತ್ಯಸಂಸ್ಕಾರಕ್ಕಾಗಿ ಶವವನ್ನು ಹೊತ್ತುಕೊಂಡು ಗ್ರಾಮಸ್ಥರು 6 ಕಿಮೀ ನಡೆದುಕೊಂಡು ಹೋಗಿದ್ದಾರೆ.ಶವವನ್ನು ಹೊತ್ತುಕೊಂಡು ತೆರಳುವಾಗ ಬಂಡೂರಿ ನಾಲಾಗೆ ಅಡ್ಡಲಾಗಿ ನಿರ್ಮಿಸಿರುವ ಕಟ್ಟಿಗೆಯ ತೂಗುಸೇತುವೆ ಮೇಲೆ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಶವ ಸಾಗಾಟ ಮಾಡಬೇಕಾಯಿತು. ರಸ್ತೆ ಸಂಪರ್ಕ ಹಾಗೂ ಸೇತುವೆ ಇಲ್ಲದೇ ಕಾಡಂಚಿನ ಜನರು ಪರದಾಡುವಂತಾಗಿದೆ.