ವಿಜಯಪುರ : ಮುಡಾದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಅವರು ಸ್ವಪಕ್ಷದ ವಿರುದ್ಧವೇ ಸ್ಪೋಟಕ ಹೇಳಿಕೆ ನೀಡಿದ್ದು, ಮಾಜಿ ಅಧ್ಯಕ್ಷ ಹೆಚ್.ವಿ ರಾಜೀವ್ ಬಿಜೆಪಿಯಲ್ಲೆ ಇದ್ದಾಗ ಆದ ಹಗರಣ ನಡೆದಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾನೆ. ಕಾಂಗ್ರೆಸ್ಗೆ ಯಾಕೆ ಸೇರಿದ್ದಾರೆ ಅಂದರೆ ಇದೆಲ್ಲ ಮುಚ್ಚಿ ಹಾಕಲು ಸೇರಿದ್ದಾರೆ ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಕಿಡಿಕಾರಿದ್ದಾರೆ.
ರಾಜೀವ ಯಾರ ಶಿಷ್ಯ ಅನ್ನೋದು ಎಲ್ಲರಿಗೂ ಗೊತ್ತಿದೆ. ವಿಧಾನಸೌಧದಲ್ಲಿ ನಾನು ಹೇಳಿದ್ದೇನೆ. ಕೇವಲ ಸಿದ್ಧರಾಮಯ್ಯ ಅವರನ್ನ ಮಾತ್ರ ಗುರಿ ಮಾಡಬೇಡಿ. ಇವತ್ತು ನಮ್ಮ ವಿಜಯೇಂದ್ರ ಹೇಳುತ್ತಾರೆ, ಇದು ಕೇವಲ ಸಿದ್ಧರಾಮಯ್ಯ ವಿರುದ್ದ ಹೋರಾಟ ಅಲ್ಲ, ಕಾಂಗ್ರೆಸ್ ವಿರುದ್ಧ ಹೋರಾಟ ಅಂತ, ಹಾಗಾದ್ರೆ ಸಿದ್ಧರಾಮಯ್ಯ ಯಾರು? ಬೇರೆನಾ, ಬಿಜೆಪಿಯವರಾ? ಎಂದು ಪ್ರಶ್ನಿಸಿದ್ದಾರೆ.
ಮುಡಾ ಹಗರಣದಲ್ಲಿ ಯಡ್ಡಿಯೂರಪ್ಪ ಇದ್ದಾರೋ, ವಿಜಯೇಂದ್ರ ಇದ್ದಾರೋ, ಯಡ್ಡಿಯೂರಪ್ಪ ಅಕ್ಕನ ಮಕ್ಕಳು ಇದ್ದಾರೋ, ರಾಜೀವ್ ಅದರೋ, ಮತ್ಯಾರು ಇದ್ದಾರೆ ಎಲ್ಲರೂ ಸಿಕ್ಕಿ ಬೀಳುತ್ತಾರೆ. ರಾಜೀವ್ ಯಡ್ಡಿಯೂರಪ್ಪ ಶಿಷ್ಯನೋ, ಏನು ವಿಜಯೇಂದ್ರ ಶಿಷ್ಯನೋ ಯಾರೆಂದು ಹೇಳಬೇಕು. ಅವರನ್ನೇ ಕೇಳಿ ರಾಜೀವ್ ನಿಮ್ಮ ಶಿಷ್ಯ ಇದ್ದಾನೆ ಏಕೆ ಪಾದಯಾತ್ರೆ ಮಾಡುತ್ತಿದ್ದೀರಿ ಅಂತಾ ವಿಜಯೇಂದ್ರನನ್ನು ಕೇಳಬೇಕು ಎಂದಿದ್ದಾರೆ.
ಸಚಿವ ನಾಗೇಂದ್ರ ರಾಜೀನಾಮೆ ಪಡೆದಿದ್ದಕ್ಕೆ ಇವರು ಸಿಎಂಗೆ ಅಭಿನಂದನೆ ಸಲ್ಲಿಸುತ್ತಾರೆ. ನಾಗೇಂದ್ರ ಹಾಗೂ ವಾಲ್ಮಿಕಿ ನಿಗಮದ ಅಧ್ಯಕ್ಷರನ್ನ ಸಚಿವ ಸಂಪುಟದಿಂದ ಕಿತ್ತು ಹಾಕಬೇಕಿತ್ತು. ಅದು ನಿಜವಾದ ಸಿದ್ಧರಾಮಯ್ಯ ಅಂತಾ ಗೊತ್ತಾಗುತ್ತಿತ್ತು. ಕಾರಣ ಇದರ ತನಿಖೆ ಸಿಬಿಐನಿಂದ ಮಾತ್ರ ಸಾಧ್ಯ. ಹಾಗಾಗಿ ಸಿಬಿಐ ತನಿಖೆಗೆ ಕೊಡಿ ಎಂದು ಆಗ್ರಹಿಸಿದ್ದಾರೆ.