ಮೈಸೂರು : ಲೋಕಸಭೆ ಚುನಾವಣೆಯಲ್ಲಿ ಗೆದ್ದು ಇದೀಗ ಕೇಂದ್ರ ಸಚಿವರಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಅವರಿಗೆ ರಾಜ್ಯಕ್ಕೆ ಭೇಟಿ ನೀಡಲು ಕಡಿಮೆ ಸಮಯ ಅವಕಾಶ ಇರುವುದರಿಂದ, ಇದೀಗ ಜೆಡಿಎಸ್ ಪಾಳಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಯಾರ ಹೆಗಲಿಗೆ ನೀಡಬೇಕು ಎಂಬುದರ ಕುರಿತು ಹಲ್ ಚಲ್ ಶುರುವಾಗಿದೆ. ಈ ಕುರಿತು ಜೆಡಿಎಸ್ ಶಾಸಕ ಹರೀಶ್ ಗೌಡ ಏನು ಹೇಳಿದ್ದಾರೆ ಎನ್ನುವುದನ್ನ ತಿಳಿಯೋಣ.
ಹೌದು ಇಂದು ಮೈಸೂರಿನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಹರೀಶ್ ಗೌಡ ಮಾತನಾಡಿದ್ದು, ಎಚ್ ಡಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿರುವ ಕಾರಣ ಎಲ್ಲಾ ರಾಜ್ಯಗಳಿಗೆ ಹೋಗಬೇಕು. ವಾರದಲ್ಲಿ ನಾಲ್ಕು ದಿನ ದೆಹಲಿಯಲ್ಲಿದ್ದು ಎಲ್ಲ ರಾಜ್ಯಗಳಿಗೆ ಹೋಗಬೇಕು. ಹೀಗಾಗಿ ವಾರದಲ್ಲಿ ಒಂದು ದಿನ ಕರ್ನಾಟಕಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ಯಾರಿಗೆ ಎಂಬ ಪ್ರಶ್ನೆ ಉದ್ಭವವಾಗಿತ್ತು. ಎಚ್ ಡಿ ಕುಮಾರಸ್ವಾಮಿ ಅವರು ನಮ್ಮೆಲ್ಲರ ಜೊತೆಗೆ ಚರ್ಚೆ ನಡೆಸಿದ್ದಾರೆ. ಇದರಿಂದ ನಿಖಿಲ್ ಕುಮಾರಸ್ವಾಮಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟುತ್ತಾರೆ ಎಂದಾಗ ಈ ವೇಳೆ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಪಕ್ಷದ ನಾಯಕತ್ವದ ಬಗ್ಗೆ ಮಾಹಿತಿ ಬಹಿರಂಗಪಡಿಸಿದಂತೆ ಹರೀಶ್ ಗೌಡಗೆ ಸೂಚಿಸಿದರು.
ಈ ವೇಳೆ ಹರೀಶ್ ಗೌಡ ಎಲ್ಲವು ತೀರ್ಮಾನ ಆಗಿದೆ ಬಿಡಣ್ಣ, ಯಾವುದೇ ಹುದ್ದೆ ಪಡೆಯದೇ ಪಕ್ಷ ಕಟ್ಟುತ್ತೇನೆ ಎಂದು ನಿಖಿಲ್ ಹೇಳಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ನಟಿಸಲ್ಲ ಎಂದು ನಿಖಿಲ್ ಘೋಷಿಸಿದ್ದಾರೆ.ನಿಖಿಲ್ ರಾಜ್ಯದಲ್ಲಿ ಉತ್ತಮವಾಗಿ ಪಕ್ಷ ಸಂಘಟನೆ ಮಾಡುತ್ತಾರೆ ಎಂದು ತಿಳಿಸಿದರು.