ಬೆಂಗಳೂರು : ಒಂದೇ ಕಟ್ಟಡದಲ್ಲಿ ವಾಸವಾಗಿದ್ದ 16 ಮಂದಿ ಮನೆ ಭೋಗ್ಯದಾರರಿಗೆ 1 ಕೋಟಿಗಿಂತ ಹೆಚ್ಚು ಹಣ ವಂಚಿಸಿದ ಆರೋಪದಡಿ ಮನೆ ಮಾಲೀಕಿಯನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಂಚನೆಗೊಳಗಾದ ಮೊಹಮ್ಮದ್ ನಹೀಂ ಸೇರಿದಂತೆ 16 ಮಂದಿ ನೀಡಿದ ದೂರಿನ ಮೇರೆಗೆ ಸುಧಾ (45) ಎಂಬುವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.
ಹೌದು ಮನೆ ಮಾಲೀಕರಾದ ಸುಧಾ ಗಂಗೊಂಡನಹಳ್ಳಿ ಕಟ್ಟಡದ ಮೇಲೆ ಹೋಮ್ ಲೋನ್ ತೆಗೆದುಕೊಂಡಿದ್ದು, ಸಕಾಲಕ್ಕೆ ಹಣವನ್ನು ಪಾವತಿಸದ ಕಾರಣ ಬ್ಯಾಂಕ್ ಅಧಿಕಾರಿಗಳು ಮನೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ. 17 ಮಂದಿ ಭೋಗ್ಯದಾರರಿಂದ ಹಣ ಪಡೆದಿರುವುದಲ್ಲದೇ, ಸಾಲದ ವಿಚಾರವಾಗಿ ಬ್ಯಾಂಕ್ನಿಂದ ನೋಟಿಸ್ ಬಂದಿರುವುದನ್ನು ತಿಳಿಸದೇ ವಂಚಿಸಲಾಗಿದೆ.
ವಿಚಾರ ಗೊತ್ತಾಗಿ ಹಣ ಹಿಂತಿರುಗಿಸುವಂತೆ ಕೇಳಿದರೆ ಆಶ್ಲೀಲವಾಗಿ ನಿಂದಿಸಿ, ನಮ್ಮನ್ನು ರೌಡಿಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಸಿ ನಂಬಿಕೆ ದ್ರೋಹವೆಸಗಿದ್ದಾರೆ ಎಂದು ದೂರಿದ್ದಾರೆ. ಸುಧಾ ಗಂಗೊಂಡನಹಳ್ಳಿಯ ಎಸ್.ಎನ್.ಲುಮಿನೋಸ್ ಅಪಾರ್ಟ್ಮೆಂಟ್ನ ಮಾಲೀಕರಾಗಿದ್ದರು. ಐದು ಮಹಡಿಗಳಿರುವ ಅಪಾರ್ಟ್ಮೆಂಟ್ನಲ್ಲಿ 16 ಮನೆಗಳನ್ನು ಭೋಗ್ಯಕ್ಕೆ ನೀಡಿದ್ದರು.
ಕಳೆದ ಜುಲೈ 11ರಂದು ದಿ ಸಿಟಿ ಕೋಆಪರೇಟಿವ್ ಬ್ಯಾಂಕ್ನನಲ್ಲಿ ಸುಧಾ ತೆಗೆದುಕೊಂಡಿದ್ದ ಸಾಲ ಪಾವತಿಸದ ಕಾರಣ ಬ್ಯಾಂಕ್ ಅಧಿಕಾರಿಗಳು ಅಪಾರ್ಟ್ಮೆಂಟ್ ವಶಕ್ಕೆ ಪಡೆಯಲು ಬಂದಾಗ ತಾವು ವಂಚನೆಗೊಳಗಾಗಿರುವುದು ಭೋಗ್ಯದಾರರಿಗೆ ಗೊತ್ತಾಗಿದೆ. ಇದೀಗ ಭೋಗ್ಯದಾರರು ಲೀಸ್ಗೆ ನೀಡಿದ ಹಣವೂ ಇಲ್ಲದೇ, ಇದ್ದ ಮನೆಯಲ್ಲಿಯೂ ಇರಲಾರದೇ ಅತಂತ್ರರಾಗಿದ್ದಾರೆ. ಸದ್ಯ ಚಂದ್ರಾಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸುಧಾಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.