ಬೆಳಗಾವಿ : ರಾಜ್ಯದಲ್ಲಿ ಡೆಂಘಿ ಅಬ್ಬರ ಮುಂದುವರೆದಿದ್ದು, ಇಂದು ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಡೆಂಗ್ಯೂ ಜ್ವರಕ್ಕೆ ಇಬ್ಬರು ಬಾಲಕಿಯರು ಬಲಿಯಾಗಿರುವಾಗ ಘಟನೆ ವರದಿಯಾಗಿದೆ.
ಹೌದು ಶಂಕಿತ ಡೆಂಗ್ಯೂ ಜ್ವರದಿಂದ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ 14 ವರ್ಷದ ಪ್ರಣಾಲಿ ಹುಂದ್ರೆ ಡೆಂಘಿ ಸೊಂಕಿಗೆ ಬಲಿಯಾಗಿದ್ದಾಳೆ.ಭಾನುವಾರ ಬಾಲಕಿಗೆ ಒಂದೆರಡು ಸಲ ವಾಂತಿ – ಭೇದಿ ಆಗಿದ್ದು, ಸೋಮವಾರ ಜ್ವರ ಕಾಣಿಸಿಕೊಂಡಿತ್ತು.
ಮಂಗಳವಾರ ತೀವ್ರ ಜ್ವರದ ಹಿನ್ನೆಲೆಯಲ್ಲಿ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಗ್ಗೆ ಬಾಲಕಿ ಕೊನೆಯುಸಿರೆಳೆದಿದ್ದಾರೆ. ರಕ್ತದ ಮಾದರಿ ತಪಾಸಣೆ ಮಾಡಿದಾಗ ಶಂಕಿತ ಡೆಂಗ್ಯೂ ಪತ್ತೆಯಾಗಿದೆ.ಬಾಲಕಿಯು ಹೊನಗಾದ ಮರಾಠಾ ಮಂಡಳ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದಳು ಎಂದು ತಿಳಿದುಬಂದಿದ್ದು, ಬಾಲಕಿಯ ಸಾವಿನ ಸುದ್ದಿ ಕೇಳಿ, ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಬಲಿ!
ಇನ್ನೊಂದೆಡೆ, ಹುಬ್ಬಳ್ಳಿಯಲ್ಲಿಯೂ ಕೂಡ ಜ್ವರದಿಂದ ಬಳಲುತ್ತಿದ್ದ 5 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಕರಿಯಪ್ಪಗೌಡ ಎಂಬವರ ಪುತ್ರಿ ಪೂರ್ಣಾ ಪಾಟೀಲ್ (5) ಮೃತ ಬಾಲಕಿ ಎಂದು ತಿಳಿದುಬಂದಿದೆ.
ಕಳೆದ ಕೆಲ ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯು ತೀವ್ರ ಜ್ವರದಿಂದ ಬಳಲುತ್ತಿದ್ದಳು. ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಕರಿಯಪ್ಪಗೌಡರ 8 ವರ್ಷದ ಮಗನಿಗೂ ಜ್ವರ ಕಾಣಿಸಿಕೊಂಡಿದ್ದು, ಗೋಕುಲ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಇದುವರೆಗೂ ಡೆಂಗ್ಯೂ ಜ್ವರದ ಬಗ್ಗೆ ಖಚಿತವಾಗಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.