ಮೈಸೂರು : ತನ್ನ ಅತ್ತೆಯ ಮಗಳು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವುದನ್ನು ನೋಡಿ ಮನನೊಂದು ಯುವಕನೊಬ್ಬ ತಾನು ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೌದು ಮೈಸೂರಿನ ಮಂಡಕಳ್ಳಿಯ ನಿವಾಸಿ ನಾಗರಾಜು ಮತ್ತು ಮಂಜುಳಾ ದಂಪತಿ ಪುತ್ರಿ ಮೋನಿಕಾಳನ್ನು (20) ಜ್ಯೋತಿ ನಗರದ ಎಂಸಿಸಿ ಕಾಲೋನಿಯ ನಿವಾಸಿ ಮನು(22) ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದನು. ಇಬ್ಬರ ಕುಟುಂಬದವರು ಸಹ ಅವರ ಪ್ರೀತಿಗೆ ಒಪ್ಪಿ ಮದುವೆ ಮಾಡಲು ಸಹ ಒಪ್ಪಿಕೊಂಡಿದ್ದರು.
ಆದರೆ ಬುಧವಾರ ರಾತ್ರಿ ಮೋನಿಕಾ ಮತ್ತು ಮನು ನಡುವೆ ಕ್ಷುಲ್ಲಕ ವಿಚಾರವಾಗಿ ಜಗಳವಾಗಿದ್ದು, ಇದರಿಂದ ಮನನೊಂದ ಮೋನಿಕಾ ಕೆಲಸ ಮಾಡುತ್ತಿದ್ದ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಕಷ್ಟು ಹೊತ್ತಾದರೂ ಕೋಣೆಯಿಂದ ಮೋನಿಕಾ ಹೊರ ಬಾರದೇ ಇರುವುದನ್ನ ಗಮನಿಸಿ ಮನೆ ಮಾಲೀಕರು ಮೋನಿಕಾ ಅವರ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿದ್ದ ಮೋನಿಕಾ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸಂದರ್ಭದಲ್ಲಿ ಮನು ಕೂಡ ಆಸ್ಪತ್ರೆಗೆ ಬಂದಿದ್ದು, ಅಲ್ಲಿ ವೈದ್ಯರು ಮೋನಿಕಾ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇದರಿಂದ ಮನನೊಂದು ಮನೆಗೆ ಬಂದ ಮನು ಕೂಡ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮೃತರ ಪೋಷಕರು ನೀಡಿದ ದೂರಿನ ಮೇರೆಗೆ ಕುವೆಂಪು ನಗರ ಮತ್ತು ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.