ನವದೆಹಲಿ : ಖನಿಜಗಳ ಮೇಲಿನ ರಾಯಧನವು (ರಾಯಲ್ಟಿ) ತೆರಿಗೆ ಅಲ್ಲ. ಗಣಿಗಳು ಹಾಗೂ ಖನಿಜ ಹೊಂದಿರುವ ಭೂಮಿಗಳ ಮೇಲೆ ತೆರಿಗೆ ಹೇರುವ ಶಾಸನಾತ್ಮಕ ಅಧಿಕಾರವನ್ನು ರಾಜ್ಯಗಳು ಮಾತ್ರ ಹೊಂದಿವೆ’ ಎಂದು ಸುಪ್ರೀಂಕೋರ್ಟ್ 8:1 ಬಹುಮತದ ತೀರ್ಪು ನೀಡಿದೆ. 9 ಸದಸ್ಯ ಬಲದ ಸಾಂವಿಧಾನಿಕ ಪೀಠದ ಈ ತೀರ್ಪಿನಿಂದಾಗಿ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. ಜಾರ್ಖಂಡ್ ಹಾಗೂ ಒಡಿಶಾದಂತಹ ಖನಿಜ ಸಂಪತ್ತಿನ ರಾಜ್ಯಗಳಿಗೆ ಈ ತೀರ್ಪು ಮತ್ತಷ್ಟು ಆದಾಯದ ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಖನಿಜಗಳ ಮೇಲಿನ ರಾಯಧನ ಎಂಬುದು ತೆರಿಗೆಯೇ? ಖನಿಜಗಳನ್ನು ಹೊರತೆಗೆಯುವುದಕ್ಕೆ ತೆರಿಗೆ ಹೇರುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆಯೇ? ಅಥವಾ ರಾಜ್ಯಗಳೂ ಅದರಲ್ಲಿ ಅಧಿಕಾರ ಹೊಂದಿವೆಯೇ? ಅಥವಾ ತಮ್ಮ ವ್ಯಾಪ್ತಿಯಲ್ಲಿ ಖನಿಜ ಹೊಂದಿರುವ ಭೂಮಿಗಳ ಮೇಲೆ ತೆರಿಗೆ ಹೇರುವ ಅಧಿಕಾರ ರಾಜ್ಯಗಳಿಗೆ ಇದೆಯೇ? ಎಂಬುದು ಬಹಳ ಬಿಕ್ಕಟ್ಟಿನ ವಿಷಯವಾಗಿತ್ತು. ಈ ಕುರಿತು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಇತರೆ ಏಳು ನ್ಯಾಯಮೂರ್ತಿಗಳು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.
ಈ ವೇಳೆ ಕನ್ನಡಿಗ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು, ಭಿನ್ನ ತೀರ್ಪು ನೀಡಿದ್ದು, ಗಣಿ ಹಾಗೂ ಖನಿಜಯುಕ್ತ ಜಾಗಗಳ ಮೇಲೆ ತೆರಿಗೆ ಹೇರುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂದು ಹೇಳಿದರು. ಆದರೆ ಉಳಿದವರು ಸಂವಿಧಾನದ 2ನೇ ಪಟ್ಟಿಯಲ್ಲಿರುವ 50ನೇ ನಮೂದಿನ ಪ್ರಕಾರ ಖನಿಜ ಹಕ್ಕಿನ ಮೇಲೆ ತೆರಿಗೆ ಹೇರುವ ಅಧಿಕಾರ ಸಂಸತ್ತಿಗೆ ಇಲ್ಲ. ಖನಿಜಗಳ ಮೇಲಿನ ರಾಯಧನ ಎಂಬುದು ತೆರಿಗೆಯಲ್ಲ ಎಂದು ಬಹುಮತದ ತೀರ್ಪು ನೀಡಿದರು. ಹೀಗಾಗಿ ತೀರ್ಪು 8:1 ಆಗಿರುವುದರಿಂದ ಬಹುಮತದ ತೀರ್ಪೇ ಜಾರಿಗೆ ಬರಲಿದೆ.