ಹಾಸನ : ತಂದೆಯೊಬ್ಬ ತನ್ನ ಮಗನ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ದಾಖಲಾತಿ ಕೊಡದೆ ಮಗನಿಗೆ ಸತಾಯಿಸುತ್ತಿದ್ದ, ಇದರಿಂದ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಟಿಪ್ಪು ನಗರದಲ್ಲಿ ನಡೆದಿದೆ.
ಅಖಿಲ್ ಪಾಷಾ (25) ಎನ್ನುವ ಯುವಕ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ.ಸೈಯದ್ ಪಾಷಾ ಎನ್ನುವ ಈತನ ತಂದೆ ಮಗ ಹಾಗೂ ಸೊಸೆಗೆ ಕಿರುಕುಳ ನೀಡುತ್ತಿದ್ದರು.ಮೂರು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಅಖಿಲ್ ಪಾಷಾ. ಎರಡು ವರ್ಷಗಳಿಂದ ಪತ್ನಿಯೊಂದಿಗೆ ಅರಸೀಕೆರೆಯ ಟಿಪ್ಪು ನಗರದಲ್ಲಿ ವಾಸವಿದ್ದರು.
ಆದರೆ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇತರೆ ದಾಖಲಾತಿಗಳು ಹಾಸನದ ತಂದೆಯ ಮನೆಯಲ್ಲಿಟ್ಟಿದ್ದ ಯುವಕ. ತಂದೆಯ ಬಳಿ ದಾಖಲಾತಿಳನ್ನು ಕೇಳಿದರೆ ದಾಖಲಾತಿ ಕೊಡದೇ ಸತಾಯಿಸುತ್ತಿದ್ದ. ಇದರಿಂದ ತಂದೆ ಮಗನ ನಡುವೆ ಗಲಾಟೆಯಾಗಿತ್ತು. ರಾಜೀ ಸಂಧಾನ ಮಾಡಿ ಸಮಾಜದ ಮುಖಂಡರು, ಹಿರಿಯರು ಬಗೆಹರಿಸಿದ್ದರು.
ಆದರೆ ತಂದೆ ದಾಖಲಾತಿಗಳನ್ನು ಕೊಡದೇ ಇದ್ದಾಗ ಹಾಸನ ಪೆನ್ಷನ್ ಮೊಹಲ್ಲಾ ಠಾಣೆಗೆ ಮಗ ದೂರು ನೀಡಿದ್ದ. ಸೈಯದ್ ಪಾಷಾನ ಕರೆಸಿ ವಿಚಾರಿಸಿದ್ದ ಪೊಲೀಸರು. ಈ ವೇಳೆ ಯಾವುದೇ ದಾಖಲೆಗಳು ನನ್ನ ಬಳಿ ಇಲ್ಲ ಎಂದಿದ್ದ ಸೈಯದ್ ಪಾಷಾ. ಇದರಿಂದ ಮನನೊಂದ ಮಗ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.