ಬೆಂಗಳೂರು: ಪ್ರಸಕ್ತ ವರ್ಷ ಸುರಿದ ಭಾರೀ ಮಳೆಗೆ ಜುಲೈ ಮುಕ್ತಾಯಕ್ಕೆ ಒಂದು ವಾರ ಬಾಕಿ ಇರುವಂತೆಯೇ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಈ ಮೂಲಕ ಎರಡು ವರ್ಷಗಳ ಬಳಿಕ ಡ್ಯಾಂ ತುಂಬಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ.
ಕಳೆದ 2 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಬಿಡುವು ಕೊಟ್ಟಿದ್ದ ವರುಣದೇವ ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಪರಿಣಾಮ ಕಾವೇರಿ ಒಡಲಾದ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅಣೆಕಟ್ಟೆ ಸಂಪೂರ್ಣ ಭರ್ತಿಯಾಗಿದೆ. ಇದರಿಂದ ಹಳೇ ಮೈಸೂರು ಭಾಗದ ಜನರಿಗೆ ಮತ್ತು ಕಾವೇರಿ ಕೊಳ್ಳದ ರೈತರಲ್ಲಿ ಮಂದಹಾಸ ಮನೆ ಮಾಡಿದೆ.
ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಕಾವೇರಿ ಸೇರಿದಂತೆ ಬಹುತೇಕ ಜಲಾಶಯಗಳು ಭರ್ತಿಯಾಗಲಿಲ್ಲ. ಈ ವರ್ಷ ಮುಂಗಾರು ಆರಂಭದಿಂದಲೂ ಕಾವೇರಿ ನದಿ ಕಣಿವೆಯಲ್ಲಿ ಉತ್ತಮ ಮಳೆಯಾಗಿದ್ದು, ಕೆಆರ್‌ಎಸ್ ಜಲಾಶಯಕ್ಕೆ ಕಳೆದ 3 – 4 ವಾರಗಳಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿತ್ತು. ಬುಧವಾರ ಸಂಜೆ 6 ಕ್ಕೆ ಜಲಾಶಯವು ಗರಿಷ್ಠ ನೀರಿನ ಮಟ್ಟ 124.8 ಅಡಿ ತಲುಪಿದೆ.
ಕಳೆದ ನಾಲ್ಕೆತೈದು ದಿನಗಳಿಂದ 50 ರಿಂದ 70 ಸಾವಿರ ಕ್ಯುಸೆಕ್ ಒಳ ಹರಿವು ನೀರು ಹರಿದು ಬರುತ್ತಿತ್ತು. ಹೀಗಾಗಿ 124.80 ಅಡಿ ಸಾಮರ್ಥ್ಯದ ಜಲಾಶಯದಿಂದ 52 ಸಾವಿರ ಕ್ಯುಸೆಕ್ ಹೆಚ್ಚುವರಿ ನೀರನ್ನು ಜಲಾಶಯದ 26ಕ್ಕೂ ಹೆಚ್ಚು ಕ್ರಸ್ಟ್ ಗೇಟ್‌ಗಳ ಮೂಲಕ ಕಾವೇರಿ ನದಿಗೆ ಹರಿಸಲಾಗುತ್ತಿತ್ತು.
ಇನ್ನೂ ಎರಡು ತಿಂಗಳು ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಚೆನ್ನಾಗಿ ಬೀಳುವ ಸಾಧ್ಯತೆ ಇದೆ. ಈ ಕಾರಣ ಡ್ಯಾಂಗೆ ಮತ್ತಷ್ಟು ಒಳಹರಿವು ಹೆಚ್ಚಾಗಲಿದ್ದು, ಅಷ್ಟೇ ಪ್ರಮಾಣದಲ್ಲಿ ಹೊರಹರಿವು ಬಿಡಲಾಗುತ್ತದೆ. ಹೀಗಾಗಿಯೇ ಮಂಡ್ಯ ಜಿಲ್ಲಾಡಳಿತ ಕಾವೇರಿ ನದಿ ಪಾತ್ರದ ಜನರಿಗೆ ಅಲರ್ಟ್ ಘೋಷಣೆ ಮಾಡಲಾಗಿದೆ.
ಯಾವ ಸಮಯದಲ್ಲಾದರೂ ಅಧಿಕ ಪ್ರಮಾಣದಲ್ಲಿ ನದಿಗೆ ಹರಿಸಲಾಗುತ್ತದೆ. ಹೀಗಾಗಿ ಜನರು ತಮ್ಮ ಆಸ್ತಿಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಮುಂದಾಗಬೇಕು. ಅಲ್ಲದೇ ನದಿ ದಡಕ್ಕೆ ಯಾರು ಸಹ ಹೋಗಬಾರದು ಎಂದು ಮಂಡ್ಯ ಡಿಸಿ ಡಾ.ಕುಮಾರ್ ಆದೇಶಿಸಿದ್ದಾರೆ.