ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ನಂದಿನಿ ಹಾಲಿನ ದರದಲ್ಲಿ ಏರಿಕೆ ಮಾಡಿ ಕರ್ನಾಟಕ ಹಾಲು ಒಕ್ಕೂಟ (KMF) ಹೊಸ ದರ ಪರಿಷ್ಕರಣೆ ಮಾಡಿತ್ತು. ಇನ್ನೂ ಈ ಕುರಿತು KMF ನಿರ್ಧಾರ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಈ ಕುರಿತಂತೆ ನಗರದ ನಿವಾಸಿ ಡಾ.ಆರ್.ಅರ್ಮಿತಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಂದಿನಿ ಹಾಲಿನ ಬೆಲೆ ಏರಿಕೆಯೊಂದಿಗೆ ಹಾಲಿನ ದರದ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ 50 ಎಂಎಲ್ ನೀಡುತ್ತಿರುವುದರಿಂದ ಬೆಲೆ ಹೆಚ್ಚಳ ಮಾಡಲಾಗಿದೆ ಎಂಬ ಕೆಎಂಎಫ್ ವಾದ ತರ್ಕಬದ್ಧವಾಗಿಲ್ಲ. ಇದು ವಾಣಿಜ್ಯ ಕೌಶಲ್ಯದ ನಿಯಮಗಳಿಗೆ ವಿರುದ್ಧವಾಗಿದೆ. ಜತೆಗೆ, ಸಂವಿಧಾನದ ಪರಿಚ್ಛೇದ 14(ಸಮಾನತೆ) ವಿರುದ್ಧವಾಗಿದೆ. ದೇಶದ ಯಾವುದೇ ಹಾಲು ಒಕ್ಕೂಟ ಹಾಲಿನ ಬೆಲೆ ಹೆಚ್ಚಳ ಮಾಡಿಲ್ಲ. ಹೀಗಾಗಿ, ಬೆಲೆ ಏರಿಕೆ ಮಾಡಿರುವ ಕೆಎಂಎಫ್ ಕ್ರಮ ರದ್ದುಪಡಿಸಬೇಕು ಎಂದು ಕೋರಿದ್ದರು.
ಬೆಲೆ ಏರಿಕೆಯು ತಜ್ಞರ ಅಭಿಪ್ರಾಯ ಹಾಗೂ ಸರ್ಕಾರದ ನಿರ್ದಿಷ್ಟ ನೀತಿಯಿಂದ ನಿರ್ಣಯವಾಗುತ್ತದೆ. ಶಾಸನಬದ್ಧ ನೀತಿಯ ಉಲ್ಲಂಘನೆಯಾದ ಸಂದರ್ಭದಲ್ಲಿ ನ್ಯಾಯಾಂಗ ಪರಿಶೀಲನೆಗೆ ಅವಕಾಶವಿರುತ್ತದೆ. ಇಲ್ಲಿ ವಾಣಿಜ್ಯ ಉದ್ದೇಶದಿಂದ ತಜ್ಞರ ಅಭಿಪ್ರಾಯದೊಂದಿಗೆ ಹೆಚ್ಚಳ ಮಾಡಲು ಕೆಎಂಎಫ್ ನಿರ್ಧಾರ ತೆಗೆದುಕೊಂಡಿದೆ. ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಪ್ರಶ್ನೆ ಮಾಡಲಾಗದು. ಆದ್ದರಿಂದ ಅರ್ಜಿ ವಜಾಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.