ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮುಖ್ಯಮಂತ್ರಿಯಲ್ಲ ಅವರು ಕರ್ನಾಟಕ ರಾಜ್ಯದ ಆರು ಕೋಟಿ ಕನ್ನಡಿಗರಿಗೂ ಕೂಡ ಮುಖ್ಯಮಂತ್ರಿನೇ ಎಂದು ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಆಯೋಗದ ಸಭೆಯನ್ನು ಸಿಎಂ ಬಹಿಷ್ಕಾರ ಮಾಡಿದ್ದಾರೆ. ಸಭೆ ಬಹಿಷ್ಕಾರದ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಿಎಂ ಅಲ್ಲ ಆರೂವರೆ ಕೋಟಿ ಕನ್ನಡಿಗರ ಸಿಎಂ ಸಿದ್ದರಾಮಯ್ಯ ರಾಜಕೀಯ ಬಿಡಬೇಕು ಎಂದು ಇದೆ ವೇಳೆ ಆಗ್ರಹಿಸಿದರು.
ಮುಡಾ ಹಗರಣದ ಬಗ್ಗೆ ಚರ್ಚೆ ಆಗಲೇಬೇಕು. ಸದನದಲ್ಲಿ ಇಂದು ಚರ್ಚೆಗೆ ಅವಕಾಶ ಕೊಡಲಿಲ್ಲ. ಸಿಎಂ ಕುಟುಂಬ ಮುಡಾ ಅಕ್ರಮದಲ್ಲಿ ಭಾಗಿಯಾಗಿದೆ. ಇದರಿಂದ ಅವರು ಲಾಭ ಪಡೆದುಕೊಂಡಿದ್ದಾರೆ. ಬಡವರಿಗೆ ಸಿಗಬೇಕಂತ ನಿವೇಶನಗಳು, ಕಾಂಗ್ರೆಸ್ ಸರ್ಕಾರ ಮನಬಂದಂತೆ ಅವರ ರಾಜಕೀಯ ಹಿಂಬಾಲಕರಿಗೆ ರಾಜಕಾರಣಿಗಳಿಗೆ, ಮುಖ್ಯಮಂತ್ರಿಗಳ ಹಿಂಬಾಲಕರಿಗೆ ಕೊಟ್ಟಿರುವಂತಹ ಉದಾಹರಣೆಗಳು ಇವೆ.
ಆ ಕುರಿತು ಚರ್ಚೆ ಮಾಡಬೇಕು ಅಂದರೆ ಸದನದಲ್ಲಿ ಆಡಳಿತ ಪಕ್ಷದವರು ಚರ್ಚೆಗೆ ಅವಕಾಶ ಕೊಟ್ಟಿಲ್ಲ. ಸುಮಾರು 5000 ಕೋಟಿಗೊ ಹೆಚ್ಚು ಬೆಲೆ ಬಾಳುವಂತಹ ನಿವೇಶಗಳನ್ನು ಕೊಟ್ಟಿದ್ದಾರೆ.ಹಾಗಾಗಿ ಪಾದಯಾತ್ರೆ ಸೇರಿ ಎಲ್ಲ ರೀತಿ ಹೋರಾಟ ಮಾಡುತ್ತೇವೆ. ಅಹೋರಾತ್ರಿ ಹೋರಾಟದ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.