ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಳಿ ಶಿರೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ 8 ದಿನಗಳ ಹಿಂದೆ ಗುಡ್ಡ ಕುಸಿದು ಹಲವರು ನಾಪತ್ತೆಯಾಗಿದ್ದರು. ಈ ವೇಳೆ ನಿನ್ನೆಯವರೆಗೂ ಎಂಟು ಜನರ ಮೃತ ದೇಹಗಳನ್ನು ಪತ್ತೆಹಚ್ಚಲಾಗಿತ್ತು.
ಇನ್ನು ಹಲವರು ಮಣ್ಣಿನಲ್ಲಿ ಹುದುಗಿ ಹೋಗಿದ್ದು ಅವರ ಶವಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದರ ಮಧ್ಯೆ ಮತ್ತೊಂದು ದುರಂತ ಸಂಭವಿಸಿದ್ದು, ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ಮರ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ- ಶಿರಸಿ ರಸ್ತೆಯ ಬಾಚನಳ್ಳಿ ಗ್ರಾಮದ ಬಳಿ ಘಟನೆ ಸಂಭವಿಸಿದೆ.
ಮೃತನನ್ನು ಯಲ್ಲಾಪುರದ ಯುವಕ ವಿನಯ ಗಾಡಿಗ(25) ಎಂದು ಗುರುತಿಸಲಾಗಿದ್ದು, ಯಲ್ಲಾಪುರದ ಹಾಸಣಗಿ ಪಂಚಾಯತ್ ವ್ಯಾಪ್ತಿಯ ಕಬ್ಬಿನಗದ್ದೆ ನಿವಾಸಿಯಾಗಿದ್ದಾನೆ. ಯಲ್ಲಾಪುರದಿಂದ ಮಂಚಿಕೇರಿ ಕಡೆ ತೆರಳುತ್ತಿದ್ದನು. ಈ ವೇಳೆ ಸ್ಕೂಟಿಯಲ್ಲಿ ನಿಧಾನವಾಗಿ ಹೋಗುತ್ತಿದ್ದಾಗ ಧೊಪ್ಪನೇ ಮೈಮೇಲೆ ಮರ ಮುರಿದು ಬಿದ್ದಿದೆ.
ಬೃಹತ್ ಗಾತ್ರದ ಮರದಡಿ ಸಿಲುಕಿದ ವಿನಯ್ ಹಾಗೂ ಸ್ಕೂಟರ್ ಅಪ್ಪಚ್ಚಿಯಾಗಿದೆ. ಈ ದುರ್ಘಟನೆಯಲ್ಲಿ ವಿನಯ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ಕೂಟರ್ ಸವಾರನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಇತರೆ ವಾಹನಗಳ ಸವಾರರು ದೃಶ್ಯ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಮರವನ್ನು ತುಂಡರಿಸಿ ತೆರವು ಮಾಡುವ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಘಟನೆ ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.