ಬೆಂಗಳೂರು : ಕಳೆದ ಎಂಟು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ನಾಪತ್ತೆಯಾಗಿರುವವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೆ ಇಂದು 8ನೆ ಶವ ಪತ್ತೆಯಾಗಿದ್ದು, ಇದು ಓರ್ವ ವೃದ್ದೆಯ ಶವ ಎಂದು ಗುರುತಿಸಲಾಗಿದೆ. ಇದರ ಮಧ್ಯ ಸರ್ಕಾರದ ವಿರುದ್ಧ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಕುಟುಂಬದಿಂದ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಗುಡ್ಡ ಕುಸಿದು ಇಂದಿಗೆ 7 ದಿನ ಕಳೆದಿದೆ. ನಿರಂತರವಾಗಿ ನೂರಾರು ಸಿಬ್ಬಂದಿಗಳು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇನ್ನು 4 ಜನರ ಮೃತದೇಹಗಳು ಪತ್ತೆಯಾಗಬೇಕಿದೆ.ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಕುಟುಂಬಸ್ಥರಿಂದ ಸರ್ಕಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದು ಅರ್ಜಿ ಸಲ್ಲಿಸಲಾಗಿದೆ.
ಘಟನಾ ಸ್ಥಳದಲ್ಲಿ ಲಾರಿಯ ಜಿಪಿಆರ್ಎಸ್ ಲಾಸ್ಟ್ ಲೊಕೇಶನ್ ಪತ್ತೆ ಹಿನ್ನೆಲೆ ಕಾರ್ಯಾಚರಣೆ ಅವೈಜ್ಞಾನಿಕವಾಗಿ, ವಿಳಂಬವಾಗಿ ನಡೀತಿದೆ ಎಂದು ಲಾರಿ ಚಾಲಕ ಅರ್ಜುನ್ ಕುಟುಂಬಸ್ಥರಿಂದ ಆರೋಪಿಸಲಾಗಿದೆ. ಹಾಗಾಗಿ ರಾಜ್ಯ ಸರ್ಕಾರದಿಂದ ಹೈಕೋರ್ಟ್ ವರದಿ ಕೇಳಿದ್ದು, ನಾಳೆ ಈ ಪ್ರಕರಣ ಸಂಬಂಧ ವಿಚಾರಣೆ ನಡೆಯಲಿದೆ.
ಈಗಾಗಲೇ ಸ್ಥಳದಲ್ಲಿ ವೇಗವಾಗಿ ಕಾರ್ಯಚರಣೆ ನಡೆಯುತ್ತಿದ್ದು, ಮಣ್ಣಿನ ಕುಸಿತದಿಂದ ನದಿಯಲ್ಲಿ ತೇಲಿಹೋದ ಗಂಗೆಕೊಳ್ಳದ ಲೋಕೇಶ್ ನಾಯ್ಕ, ಶಿರೂರಿನ ಜಗನ್ನಾಥ ಜಟ್ಟಿ, ಉಳವರೆ ಗ್ರಾಮದ ಸಣ್ಣಿ ಹನುಮಂತಗೌಡ, ಕೇರಳ ಮೂಲದ ಅರ್ಜುನ್ ಶವ ಪತ್ತೆಯಾಗಬೇಕಿದೆ. ಶಂಕಿತ ಸ್ಥಳದಲ್ಲಿ ರಾಡಾರ್ ಮೂಲಕ ಶೋಧ ಕಾರ್ಯ ಮಾಡಿದರೂ ಟ್ರಕ್, ಟ್ಯಾಂಕರ್ಗಳು ಇರುವುದು ಪತ್ತೆಯಾಗಿಲ್ಲ. ಗುಡ್ಡದಲ್ಲಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಾಗೂ ಆರ್ಮಿ ಕಮಾಂಡೋಗಳ ತಂಡ ಶೋಧ ಕಾರ್ಯ ಮುಂದುವರೆಸಿದೆ.