ಬೆಳಗಾವಿ : ರಾಜ್ಯದಲ್ಲೊಂದು ಘೋರ ಘಟನೆಯೊಂದು ನಡೆದಿದ್ದು, ಬೆಳಗಾವಿ ತಾಲೂಕಿನ ಭೀಮಗಡ ಅರಣ್ಯ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಅಮಗಾಂವ ಗ್ರಾಮದ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ನರಳುತ್ತಿದ್ದ ಮಹಿಳೆಯೊಬ್ಬರನ್ನು ಗ್ರಾಮದ ಯುವಕರು ಸೇರಿ ಹೊತ್ತುಕೊಂಡು ಗ್ರಾಮದಿಂದ ೧೦ ಕಿಮೀ ಹೊತ್ತುಕೊಂಡು ಹೋಗಿ ಅಂಬ್ಯುಲನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಶುಕ್ರವಾರ ಈ ಘಟನೆ ನಡೆದಿದ್ದು, 38 ವರ್ಷದ ಹರ್ಷದಾ ಘಾಡಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಗ್ರಾಮದ ಯುವಕರು ಮರದ ಸ್ಟ್ರೆಚರ್ ತಯಾರಿಸಿ ಹರ್ಷದಾ ಅವರನ್ನು 10 ಕಿ.ಮೀ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ತಲುಪಿದ್ದಾರೆ. ದಟ್ಟ ಅರಣ್ಯ ಪ್ರದೇಶದಲ್ಲಿರುವ ಅಮಗಾಂವ್ ಎಂಬ ಕುಗ್ರಾಮಕ್ಕೆ ಬರಲು ರಸ್ತೆಯೂ ಇಲ್ಲ, ಮೊಬೈಲ್ ನೆಟ್ ವರ್ಕ್ ಕೂಡ ಇಲ್ಲ. ಆಂಬ್ಯುಲೆನ್ಸ್ ಬರಲು ರಸ್ತೆ ಇರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಚಿಕಲೆವರೆಗೂ ಆ ಮಹಿಳೆಯನ್ನು ಗ್ರಾಮಸ್ಥರು ಹೊತ್ತುಕೊಂಡು ಬಂದಿದ್ದಾರೆ.
ಮೊಬೈಲ್ ನೆಟ್ವರ್ಕ್ ಬರುವ ಸ್ಥಳದಿಂದ 108ಗೆ ಕರೆ ಮಾಡಿದ್ದಾರೆ. ನಂತರ ಆಂಬುಲೆನ್ಸ್ ಮೂಲಕ ರೋಗಿಯನ್ನು ಬಿಮ್ಸ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹರ್ಷದಾ ಈಗ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.