ಬೆಂಗಳೂರು : ಕೆಎಎಸ್ ಪದವಿ ಎಂಬುದು ಉನ್ನತ ಅಧಿಕಾರವಾಗಿದ್ದು, ಅಧಿಕಾರಿ ವರ್ಗದ ಶ್ರಮ ಜನರ ಸೇವೆಗೆ ಮೀಸಲಾಗಬೇಕೆ ವಿನಃ ಸ್ವಾರ್ಥ ಸಾಧನೆಗೆ ಅಲ್ಲ. ನಿಮ್ಮಗಳ ಆತ್ಮಶಾಕ್ಷಿ ನಿಮಗೆ ದಾರಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಕಿವಿಮಾತು ಹೇಳಿದರು.
ಬೆಂಗಳೂರಿನ ಐಎಎಸ್ ಅಸೋಷಿಯೇಷನ್‌ನಲ್ಲಿ ಶನಿವಾರ ನಡೆದ 2020ನೇ ತಂಡದ ಕೆಎಎಸ್ ಅಧಿಕಾರಿಗಳ ತರಬೇತಿ ಶಿಬಿರದ ಕೊನೆಯ ದಿನದ ಉಪಾಂತ್ಯ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳ ಅಧಿಕಾರ ಐದು ವರ್ಷಕ್ಕೊಮ್ಮೆ ಬದಲಾಗುತ್ತದೆ. ಹೀಗಾಗಿ ಎಲ್ಲಾ ಕಾಲದಲ್ಲೂ ಅಧಿಕಾರಿಗಳೇ ಶಾಶ್ವತ ಸರ್ಕಾರವಾಗಿದ್ದು, ಜನಪರವಾದ ಪ್ರಾಮಾಣಿಕ ಸೇವೆ ಸಲ್ಲಿಸುವುದೇ ಎಲ್ಲರ ಆದ್ಯತೆಯಾಗಲಿ. ನಿಮ್ಮೆಲ್ಲರ ಆತ್ಮಸಾಕ್ಷಿ ನಿಮಗೆ ದಾರಿ ದೀಪವಾಗಲಿ” ಎಂದು ಆಶಿಸಿದರು.
ಇಂದಿನ ದಿನಗಳಲ್ಲಿ ವ್ಯವಸ್ಥೆ ಸರಿಯಿಲ್ಲ ಎಂಬುದು ಎಲ್ಲರ ಬಾಯಿಂದಲೂ ಕೇಳಿಬರುವ ಸಾಮಾನ್ಯ ಉವಾಚವಾಗಿದೆ. ಕೆಲವು ಪ್ರಾಮಾಣಿಕ ಅಧಿಕಾರಿಗಳೂ ಹೀಗೆ ಅಸಮಾಧಾನ ಹೊರಹಾಕಿದ್ದನ್ನು ನಾನು ನೋಡಿದ್ದೇನೆ. ವ್ಯವಸ್ಥೆ ಸರಿಯಿಲ್ಲ ಎಂಬುದು ಭಾಗಶಃ ಸತ್ಯವೇ ಆದರೂ, ಈ ವ್ಯವಸ್ಥೆಯನ್ನು ಬದಲಿಸುವವರು ಯಾರು, ಹೇಗೆ? ಎಂಬ ದೊಡ್ಡ ಪ್ರಶ್ನೆ ನಮ್ಮ ಮುಂದಿದೆ. ಹೀಗಾಗಿ ಇಂದಿನ ಯುವ ಅಧಿಕಾರಿಗಳು ಸಾಧ್ಯವಾದಷ್ಟು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಬದಲಾವಣೆಗೆ ನಾಂದಿ ಹಾಡಬೇಕು. ಊರೆಲ್ಲಾ ಕೆಟ್ಟಿದೆ ಎಂದು ನಾವೂ ಕೆಡುವುದಕ್ಕಿಂತ ಒಳಿತಿನ ಕಡೆಗೆ ಹೆಜ್ಜೆ ಇಡುವುದು ಲೇಸು. ಬದಲಾವಣೆ ಎಂಬುದು ನಮ್ಮಿಂದ ಆರಂಭವಾಗಬೇಕು ಎಂದು ಅವರು ಮನವರಿಕೆ ಮಾಡಿಕೊಟ್ಟರು.
ಯಾವ ಕೆಲಸವೂ ಮೇಲೂ ಇಲ್ಲ, ಕೀಳೂ ಇಲ್ಲ. ಆದರೆ, ಮಾಡುವ ಕೆಲಸವನ್ನು ಬದ್ಧತೆಯಿಂದ ಪ್ರಾಮಾಣಿಕವಾಗಿ ಮಾಡಬೇಕು. ತಾನೂ ಸಹ ಕೆಎಎಸ್ ಅಧಿಕಾರಿಯಾಗಬೇಕು ಎಂಬುದು ಲಕ್ಷಾಂತರ ಯುವಕರ ಆಸೆ-ಕನಸು. ಆದರೆ, ಇಂದು ಆ ಮಹತ್ವದ ಜವಾಬ್ದಾರಿಗೆ ಆಯ್ಕೆಯಾಗಿರುವುದು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಈ ಹುದ್ದೆ ಪಡೆಯುವುದಕ್ಕಾಗಿ ಎಲ್ಲರೂ ಸಾಕಷ್ಟು ಶ್ರಮವಹಿಸಿರುತ್ತೀರಿ. ಜನಪರ ಆಡಳಿತ ಹಾಗೂ ಸೇವೆಯ ಕಡೆಗೂ ಅಷ್ಟೇ ನಿಷ್ಠೆ-ಬದ್ಧತೆಯಿಂದ ಕೆಲಸ ಮಾಡಿ ಎಂದು ಮನವಿ ಮಾಡಿದರು.
ಕಂದಾಯ ಇಲಾಖೆ ಎಲ್ಲಾ ಇಲಾಖೆಗಳ ಮಾತೃ ಇಲಾಖೆ. ನಮ್ಮ ಮೇಲೆ ಸಾಕಷ್ಟು ಜವಾಬ್ದಾರಿ ಇದ್ದು, ಕಳೆದ ಒಂದು ವರ್ಷಗಳಿಂದ ನಾವು ಸಾಕಷ್ಟು ಸಮಸ್ಯೆಗಳನ್ನ ಬಗೆಹರಿಸಿದ್ಗೇವೆ. ಆದರೂ, ಕೆಲವು ಅಧಿಕಾರಿಗಳು ಜಡ್ಡುಹಿಡಿದ ಹಳೆದ ಕೆಲಸ ವಿಧಾನಕ್ಕೆ ಜೋತು ಬಿದ್ದಿದ್ದಾರೆ. ಪರಿಣಾಮ ಜನರು ತಮ್ಮ ಕೆಲಸಗಳಿಗಾಗಿ ನಮ್ಮ ಕಚೇರಿಗಳನ್ನು ಅಲೆಯುವುದರಲ್ಲೇ ಅವರ ಸಮಯವೆಲ್ಲ ವ್ಯರ್ಥವಾಗುತ್ತಿದೆ, ಅಲೆದಲೆದು ಅವರು ಶಕ್ತಿಹೀನರಾಗುತ್ತಿದ್ದಾರೆ. ನಾವಿರುವುದು ಅವರ ಶಕ್ತಿಯನ್ನು ಹೀರುವುದಕ್ಕಲ್ಲ,
ಬದಲಾಗಿ ಶಕ್ತಿ ತುಂಬುವುದಕ್ಕೆ. ಹೀಗಾಗಿ ಇಂದಿನ ಯುವ ಅಧಿಕಾರಿಗಳು 21ನೇ ಶತಮಾನದ ನವ ತಂತ್ರಜ್ಞಾನಗಳನ್ನು ತಮ್ಮ ಕೆಲಸಗಳಲ್ಲಿ ಅಳವಡಿಸಿಕೊಳ್ಳಬೇಕು. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಕರ್ನಾಟಕ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ಕೆಲಸ ನಿರ್ವಹಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಅಧಿಕಾರಿಗಳಿಗೂ ಶುಭ ಕೋರಿದರು.ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯ, ಕಂದಾಯ ಆಯುಕ್ತರಾದ ಪಿ. ಸುನೀಲ್ ಕುಮಾರ್ ಉಪಸ್ಥಿತರಿದ್ದರು.