ಬೆಂಗಳೂರು : ನಕಲಿ ಜಮೀನು ದಾಖಲೆಗಳನ್ನು ಸೃಷ್ಟಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 2 ಕೋಟಿ ರೂ.ಗೂ ಹೆಚ್ಚು ಸಾಲ ಪಡೆದು ವಂಚಿಸಿದ್ದ ಮೂವರು ಆರೋಪಿಗಳನ್ನು ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನನ್ವಯ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಹೌದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಕೇಂದ್ರ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು.ಶಿವಣ್ಣ, ಸೈಯ್ಯದ್ ಹಾಶಿಂ ಹಾಗೂ ರಂಗನಾಥ ಬಂಧಿತರು ಎಂದು ತಿಳಿದುಬಂದಿದೆ.
ಬೆಂಗಳೂರು ಉತ್ತರ ತಾಲ್ಲೂಕಿನ ಮಲ್ಲತ್ತಹಳ್ಳಿ ವಿಲೇಜ್ನಲ್ಲಿರುವ ಆಸ್ತಿಯನ್ನು ಶಿವಣ್ಣ ಎಂಬವರಿಂದ ಖರೀದಿಸಲು ಸಾಲಕ್ಕಾಗಿ ಎಸ್ಬಿಐಗೆ ಅಚ್ಚುಕುಟ್ಟನ್ ಎಂಬವರು ಅರ್ಜಿ ಸಲ್ಲಿಸಿದ್ದರು. 2023ರ ಜನವರಿಯಲ್ಲಿ 1.16 ಕೋಟಿ ರೂ ಸಾಲವನ್ನು ಬ್ಯಾಂಕ್ ಮಂಜೂರು ಮಾಡಿತ್ತು. ಮೂರು ಕಂತಿನ ಬಳಿಕ ನಂತರದ ಕಂತುಗಳನ್ನು ಪಾವತಿಸದಿದ್ದಾಗ ಬ್ಯಾಂಕ್ನಿಂದ ಅಚ್ಚುಕುಟ್ಟನ್ಗೆ ನೋಟಿಸ್ ಜಾರಿಯಾಗಿತ್ತು.
ಆದರೆ ನೋಟಿಸ್ ಸ್ವೀಕೃತವಾಗದಿದ್ದಾಗ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ನಿವೇಶನ ಬೇರೆಯವರ ಹೆಸರಿನಲ್ಲಿರುವುದು ಪತ್ತೆಯಾಗಿತ್ತು. ಅನುಮಾನಗೊಂಡ ಅಧಿಕಾರಿಗಳು ಪರಿಶೀಲಿಸಿದ್ದು, ಅದೇ ನಿವೇಶನ ಖರೀದಿಯ ಕಾರಣ ನೀಡಿ 2022ರ ಅಕ್ಟೋಬರ್ನಲ್ಲಿ ಮೊಹಮ್ಮದ್ ಫೈಯಾಜ್ ಎಂಬಾತ ಎಸ್ಬಿಐನಿಂದಲೇ 1.16 ಕೋಟಿ ರೂ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ.ಎಸ್ಬಿಐ ಬೆಂಗಳೂರು ಕೇಂದ್ರ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ, ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದೆ.