ಬೆಂಗಳೂರು : ಪತಿ-ಪತ್ನಿ ನಡುವಿನ ಜಗಳವು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 498 ಅಡಿ ಕ್ರೌರ್ಯ ಮತ್ತು ಕಿರುಕುಳದ ಅಪರಾಧ ಕೃತ್ಯವಾಗುವುದಿಲ್ಲ. ಕ್ರೌರ್ಯ ಎಂದರೆ ಉದ್ದೇಶ ಪೂರ್ವಕ ಕೃತ್ಯವಾಗಿದ್ದು, ಆತ್ಮಹತ್ಯೆಗೆ ಶರಣಾಗಲು ಅಥವಾ ಜೀವಕ್ಕೆ ಅಪಾಯ ತಂದು ಕೊಳ್ಳಲು ವಿವಾಹಿತ ಮಹಿಳೆಯನ್ನು ಪ್ರಚೋದಿ ಸಿರಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ದೋಷಿಯಾಗಿ ಪರಿಗಣಿಸಿ ಶಿಕ್ಷೆ ವಿಧಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಮಡಿಕೇರಿ ತಾಲೂಕಿನ ಮುರ್ನಾಡ್ ಗ್ರಾಮದ ನಿವಾಸಿಗಳಾದ ಬಿ.ಎಸ್.ಜನಾರ್ದನ (52) ಮತ್ತು ಆತನ ತಾಯಿ ಬಿ.ಎಸ್.ಉಮಾವತಿ (73) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್ ಅವರ ಪೀಠ ಈ ಆದೇಶ ಮಾಡಿದೆ.
ಸೆಕ್ಷನ್ 498 ಅಡಿಯಲ್ಲಿ ಕ್ರೌರ್ಯ ಮತ್ತು ಕಿರುಕುಳ ಅಪರಾಧ ಕೃತ್ಯವಾಗುವುದಿಲ್ಲ. ಪತ್ನಿಯ ಮೇಲೆ ಪತಿ ಹಾಗೂ ಕುಟುಂಬಸ್ಥರಿಂದ ಕ್ರೌರ್ಯ ನಡೆದಿರುವುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಬೇಕಾಗುತ್ತದೆ. ಕ್ರೌರ್ಯ ಎಂದರೆ ಉದ್ದೇಶಪೂರ್ವಕ ಕೃತ್ಯವಾಗಿದ್ದು, ಆತ್ಮಹತ್ಯೆ, ಗಂಭೀರ ಗಾಯ ಅಥವಾ ಜೀವಕ್ಕೆ ಅಪಾಯ ಮಾಡಿಕೊಳ್ಳಲು ಮಹಿಳೆಯನ್ನು ಪ್ರಚೋದಿಸಿರಬೇಕು. ಮಾನಸಿಕ ಕಿರುಕುಳ ಕೂಡ ಕ್ರೌರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಪೀಠ ತಿಳಿಸಿದೆ.