ಬೆಂಗಳೂರು : ನಿನ್ನೆ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್‌ಗೆ ಪಂಚೆ ಧರಿಸಿ ಬಂದಿದ್ದ ರೈತರೊಬ್ಬರನ್ನು ಒಳಗೆ ಬಿಡದೆ ಅವಮಾನ ಮಾಡಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಾಲ್ ವಿರುದ್ಧ ಕೆಪಿ ಅಗ್ರಹಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೌದು ನಿನ್ನೆ ಹಾವೇರಿ ಮೂಲದ ನಾಗರಾಜ್ ಎಂಬವರು ತಂದೆ ತಾಯಿಗೆ ಸಿನಿಮಾ ತೋರಿಸಲು ಅವರನ್ನು ಜಿ.ಟಿ ಮಾಲ್‌ಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ಪಂಚೆ ಧರಿಸಿದ್ದಕ್ಕೆ ಅವರನ್ನು ಒಳಗೆ ಬಿಡದೆ ಅವಮಾನಿಸಿದ್ದರು. ಇದೀಗ ರೈತನನ್ನು ಅವಮಾನಿಸಿದ್ದ ಜಿಟಿ ಮಾಲ್ ವಿರುದ್ಧ ಬೆಂಗಳೂರಿನ ಕೆ ಪಿ ಅಗ್ರಹಾರ ಠಾಣೆಯಲ್ಲಿ FIR ದಾಖಲಾಗಿದೆ.
ಮಾಲ್ ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವಿರುದ್ಧ FIR ದಾಖಲಾಗಿದೆ. ರೈತ ಫಕೀರಪ್ಪಗೆ ಮಾಲ್ ನ ಸಿಬ್ಬಂದಿ ಅವಮಾನಿಸಿದ್ದರು. ಪಂಚೇ ಧರಿಸಿ ಬಂದಿದ್ದಕ್ಕೆ ರೈತನನ್ನು ಒಳಗೆ ಬಿಟ್ಟಿರಲಿಲ್ಲ. ಸಿಬ್ಬಂದಿ ಅರುಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಇದೀಗ ದೂರು ಸಲ್ಲಿಕೆಯಾಗಿದೆ. ಧರ್ಮರಾಜಗೌಡ ಎನ್ನುವವರ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.
ಘಟನೆ ಹಿನ್ನೆಲೆ?
ಹಾವೇರಿ ಮೂಲದ ನಾಗರಾಜ್ ಎಂಬವರು ತಂದೆ ತಾಯಿಗೆ ಸಿನಿಮಾ ತೋರಿಸಲು ಅವರನ್ನು ಜಿ.ಟಿ ಮಾಲ್‌ಗೆ ಕರೆದುಕೊಂಡು ಬಂದಿದ್ದರು.ತಂದೆ ಪಂಚೆ ಧರಿಸಿದ್ದಾರೆ ಅನ್ನೋ ಕಾರಣಕ್ಕೆ ಮಾಲ್ ಸಿಬ್ಬಂದಿ ಪ್ರವೇಶ ನಿರಾಕರಿಸಿದ್ದಾರೆ. ಪಂಚೆ ಧರಿಸಿದರಿಗೆ ಮಾಲ್ ಒಳಗೆ ಬಿಡುವುದಿಲ್ಲ, ಮಾಲ್‌ನಲ್ಲಿ ಈ ರೀತಿ ರೂಲ್ಸ್ ಇದೆ ಅಂತ ಸಿಬ್ಬಂದಿ ಹೇಳಿದ್ದಾರೆ. ಪಂಚೆ ಧರಿಸಿದ್ದಾರೆ ಎಂಬ ಕಾರಣಕ್ಕೆ ಮಾಲ್ ಒಳಗೂ ಬಿಡದೇ ಅರ್ಧ ಗಂಟೆಗೂ ಹೆಚ್ಚು ಕಾಲ ಮಾಲ್ ಮುಂದೆ ಕೂರಿಸಿ ಅವಮಾನ ಮಾಡಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದಾರೆ.
ನಾಗರಾಜ್ ಅವರ ತಂದೆ ಹಾವೇರಿ ಜಿಲ್ಲೆಯ ಅರೇಮಲ್ಲಾಪುರ ಗ್ರಾಮದ ರೈತರು. ರೈತನಿಗೆ ಮಾಲ್ ಪ್ರವೇಶ ನಿರಾಕರಿಸಿದ ಆಡಳಿತ ಮಂಡಳಿ ವರ್ತನೆಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಕೆಲವು ಯೂಟ್ಯೂಬರ್ಸ್ ವೀಡಿಯೊ ಮಾಡಲು ಶುರು ಮಾಡಿದ ಬಳಿಕ ರೈತನಿಗೆ ಮಾಲ್ ಒಳಗೆ ಪ್ರವೇಶ ನೀಡಿದ್ದಾರೆ ಎಂದು ಪುತ್ರ ನಾಗರಾಜ್ ತಿಳಿಸಿದ್ದಾರೆ.