ಬೆಂಗಳೂರು : ಬಿಪಿಎಲ್ ಕಾರ್ಡ್ಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳಿಗೆ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ಸಿಹಿ ಸುದ್ದಿ ಒಂದನ್ನು ನೀಡಿದ್ದು, ರಾಜ್ಯದಲ್ಲಿ 1.73 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಶೀಘ್ರದಲ್ಲಿ ವಿಲೇವಾರಿ ಮಾಡಿ ಅರ್ಹರಿಗೆ ಕಾರ್ಡ್ ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಇಂದು ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಪ್ರತಾಪ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಅವರು, 2.95 ಲಕ್ಷ ಪಡಿತರ ಚೀಟಿಗಾಗಿ ಅರ್ಜಿ ಬಂದಿವೆ. ಇದರಲ್ಲಿ 2.36 ಲಕ್ಷ ಮಂದಿ ಅರ್ಹರಿದ್ದಾರೆ. ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿದ ಒಂದು ವಾರದೊಳಗೆ ಅಂಥವರಿಗೆ ಆರೋಗ್ಯ ಸೇವೆ ಸಿಗುವಂತಹ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದೆ ವೇಳೆ ಕಲಾಪದ ವೇಳೆ ಬಿಜೆಪಿಯ ಎನ್ ರವಿಕುಮಾರ್, ಶಿಕ್ಷಣ ಇಲಾಖೆಯು ಅಕ್ಷರ ದಾಸೋಹಕ್ಕೆ 1 ಕೆ.ಜಿ ಅಕ್ಕಿಗೆ 29.30 ರೂ. ಕೊಟ್ಟು ಖರೀದಿಸುತ್ತಿದೆ. ಪಡಿತರ ಚೀಟಿಗೆ ನೀಡುವ ಅಕ್ಕಿಯನ್ನು 34.60 ರೂ.ಗೆ ಖರೀದಿಸಲಾಗುತ್ತಿದೆ. ಇದರ ಮಧ್ಯೆ 5.5 ರೂ.ವ್ಯತ್ಯಾವಿದೆ. ಇದು ಹೇಗೆ ಸಾಧ್ಯ? ಅಕ್ಕಿ ಹಣ ಎಲ್ಲಿಗೆ ಹೋಗುತ್ತಿದೆ? ಮಕ್ಕಳು ತಿನ್ನುವ ಅಕ್ಕಿಗೆ ಗುಣಮಟ್ಟತೆ ಇಲ್ಲವೇ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮುನಿಯಪ್ಪ, ಅಕ್ಷರ ದಾಸೋಹಕ್ಕೆ ರಾಜ್ಯದ ಟೆಂಡರ್, ಅನ್ನಭಾಗ್ಯಕ್ಕೆ ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಖರೀದಿ ದರದಲ್ಲಿ ವ್ಯತ್ಯಾಸವಿದೆ. ಕೇಂದ್ರಕ್ಕೆ ಸೇರಿದ ಎರಡು ಸಂಸ್ಥೆಗಳಿಂದಲೇ ಅಕ್ಕಿಯನ್ನು ಪಾರದರ್ಶಕವಾಗಿ ಖರೀದಿ ಮಾಡಲಾಗುತ್ತಿದೆ. ಅನ್ನಭಾಗ್ಯಕ್ಕೆ ಬೇಕಾದ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಕೊಡಲಿಲ್ಲ. ನಂತರ ನಾವು ಕೇಂದ್ರ ಸ್ವಾಮ್ಯದ ಸಂಸ್ಥೆಗಳ ಮೂಲಕವೇ ‘ಎ’ ಗ್ರೇಡ್ ರಾ ರೈಸ್ ಖರೀದಿಸಿ ವಿತರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.