ಬೆಂಗಳೂರು: ವೈದ್ಯಕೀಯ ಪದವಿಯ ಸೀಟು ಕೊಡಿಸುವುದಾಗಿ ಅಮಾಯಕರನ್ನು ನಂಬಿಸುವ ದಲ್ಲಾಳಿಗಳು ಕೋಟ್ಯಂತರ ಮೊತ್ತದ ಹಣ ಪಡೆದು ವಂಚನೆ ಮಾಡುತ್ತಿರುವುದು ಅತ್ಯಂತ ಕಳವಳಕಾರಿ ವಿಚಾರವಾಗಿದ್ದು ಇಂತಹ ಅಪರಾಧಗಳನ್ನು ತಡೆಯಬೇಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಆಡಳಿತ ಮಂಡಳಿ ಕೋಟಾದಡಿ ವೈದ್ಯಕೀಯ ಪದವಿ ಸೀಟು ಕೊಡಿಸುವುದಾಗಿ ರೂ. 2.12 ಕೋಟಿ ಪಡೆದು ವಂಚಿಸಿದ ಆರೋಪದಡಿ ಬೆಂಗಳೂರಿನ ಪಿಳ್ಳಣ್ಣ ಗಾರ್ಡನ್ನ ಎಂ.ಸಿ.ವಿರೂಪಾಕ್ಷಪ್ಪ ವಿರುದ್ಧ ದೂರು ದಾಖಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.
ನನ್ನ ವಿರುದ್ಧ ವಿ.ವಿ.ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು ಎಂದು ಕೋರಿ ನಗರದ ಪಿಳ್ಳಣ್ಣ ಗಾರ್ಡನ್ನ ಎಂ.ಸಿ.ವಿರೂಪಾಕ್ಷಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ದಲ್ಲಾಳಿಗಳ ಮೂಲಕ ವೈದ್ಯಕೀಯ ಸೀಟು ಕೊಡಿಸುವ ವ್ಯವಹಾರ ಇಂದು ಸಮಾಜದಲ್ಲಿ ವ್ಯಾಪಕವಾಗಿ ಹರಡಿದೆ ಎಂದು ದಿಗ್ಧಮೆ ವ್ಯಕ್ತಪಡಿಸಿತು. ಅರ್ಜಿದಾರರ ವಿರುದ್ಧದ ಎಫ್ಐಆರ್ ರದ್ದುಪಡಿಸಲು ಸಾಧ್ಯವೇ ಇಲ್ಲ ಎಂದು ಖಡಕ್ ಎಚ್ಚರಿಕೆ ನೀಡಿತು.