ಶಿವಮೊಗ್ಗ: ರಾಜ್ಯ ಸರ್ಕಾರ ಮಳೆಗಾಲ ಆರಂಭಕ್ಕೂ ಮುನ್ನವೇ ಡೆಂಗ್ಯೂ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಆದರೇ ಆ ಕೆಲಸ ಮಾಡಲಿಲ್ಲ. ಈಗ ಡೆಂಗ್ಯೂ ಹೆಚ್ಚಾದಾಗ ಕ್ರಮವಹಿಸುತ್ತಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಡೆಂಗ್ಯೂ ನಿಯಂತ್ರಣದಲ್ಲಿ ಫೇಲ್ ಆಗಿದೆ ಅಂತ ಮಾಜಿ ಸಚಿವ ಹರತಾಳು ಹಾಲಪ್ಪ ವಾಗ್ಧಾಳಿ ನಡೆಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಡೆಂಗ್ಯೂ ವಾರ್ಡ್ ಗೆ ಭೇಟಿ ನೀಡಿ, ಡೆಂಗ್ಯೂ ಪೀಡಿತರಾದಂತ ಜನರ ಆರೋಗ್ಯವನ್ನು ವಿಚಾರಿಸಿದರು. ಜೊತೆಗೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪರಪ್ಪ ಅವರಿಗೆ ಸೂಕ್ತ ರೀತಿಯ ಚಿಕಿತ್ಸೆಯನ್ನು ನೀಡುವಂತೆಯೂ ಸೂಚಿಸಿದರು.
ಕೆಲವೇ ದಿನಗಳಲ್ಲಿ ಅಪೆಕ್ಸ್ ಬ್ಯಾಂಕ್ ಹಗರಣವೂ ಹೊರ ಬರುತ್ತೆ
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುಡಾ ಅಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಕುಟುಂಬ ಭಾಗಿಯಾಗಿದೆ. ಬರೋಬ್ಬರಿ 14 ನಿವೇಶನಗಳನ್ನು ಮುಡಾದಿಂದ ಪಡೆದಿದೆ. ಮುಡಾ ಅಷ್ಟೇ ಅಲ್ಲ ಅಪೆಕ್ಸ್ ಬ್ಯಾಂಕ್ ಹಗರಣ ಕೂಡ ಹೊರ ಬರುತ್ತೆ. ಅಪೆಕ್ಸ್ ಬ್ಯಾಂಕ್ ನಿಂದ ಅಪಾತ್ರರಿಗೂ ಸಾಲ ಕೊಟ್ಟಿದ್ದಾರೆ ಅಂತ ಹೇಳಿದರು.
ಸಾಗರ ತಾಲ್ಲೂಕಿನಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಮಳೆಹಾನಿಯಂತ ಘಟನೆಗಳು ಘಟಿಸುತ್ತಿವೆ. ಅಂತಹ ಮಳೆಹಾನಿ ಪ್ರದೇಶಗಳಿಗೆ ತಾವು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಕೆರೆ ಹಬ್ಬಕ್ಕೆ ಹಣ ಪಡೆದಿಲ್ಲ
ಇದೇ ಸಂದರ್ಭದಲ್ಲಿ ನಾವು ಕೆರೆ ಹಬ್ಬ ಮಾಡಿದಂತ ಸಂದರ್ಭದಲ್ಲಿ ನಗರಸಭೆ, ಇಂದಿರಾ ಗಾಂಧಿ ಕಾಲೇಜಿನಿಂದ ಹಣ ಪಡೆದಿದ್ದೇವೆ ಎಂಬ ಆರೋಪ ಕೇಳಿ ಬರುತ್ತಿದೆ. ಆದ್ರೇ ನಾವು ಹಣ ಪಡೆದಿಲ್ಲ. ಕೆರೆ ಹಬ್ಬವನ್ನು ನಮ್ಮ ಮೂಲಗಳಿಂದಲೇ ಹೊಂದಿಸಿದಂತ ಹಣದಿಂದ ಮಾಡಲಾಗಿದೆ. ನಗರಸಭೆಯಿಂದ ಆಗಲೀ, ಇಂದಿರಾಗಾಂಧಿ ಕಾಲೇಜಿನಿಂದ ಆಗಲಿ ಪಡೆದಿಲ್ಲ ಅಂತ ಸ್ಪಷ್ಟ ಪಡಿಸಿದರು.
ಡೆಂಗ್ಯೂ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಫೇಲ್
ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣದಲ್ಲಿ ಕಾಂಗ್ರೆಸ್ ಸರ್ಕಾರ ಫೇಲ್ ಆಗಿದೆ. ಮಳೆಗಾಲಕ್ಕೂ ಮುನ್ನವೇ ಸೊಳ್ಳೆ ನಿಯಂತ್ರಣ, ಲಾರ್ವ ನಿಯಂತ್ರಣದಂತ ಕ್ರಮವಹಿಸಬೇಕಾಗಿತ್ತು. ಈಗ ಮಳೆಗಾಲ ಆರಂಭದ ನಂತ್ರ ಕ್ರಮವಹಿಸುತ್ತಿದೆ. ಲಾರ್ವ ನಿಯಂತ್ರಣಕ್ಕೆ ಈಗ ಹೆಚ್ಚು ಹೆಚ್ಚು ಗಮನ ಹರಿಸಬೇಕು. ಸಾಗರದಲ್ಲಿ ದಿನೇ ದಿನೇ ಡೆಂಗ್ಯೂ ಕೇಸ್ ಹೆಚ್ಚಾಗುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯವರು ಕ್ರಮವಹಿಸಬೇಕು ಅಂತ ತಿಳಿಸಿದರು.
ಮುಡಾ ಅಕ್ರಮ ನ್ಯಾಯಾಂಗ ತನಿಖೆಗೆ ವಹಿಸಿದ್ದು ಸರಿಯಿದೆ
ಮುಡಾ ಅಕ್ರಮದ ಬಗ್ಗೆ ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿದ್ದರ ಬಗ್ಗೆ ಕನ್ನಡ ನ್ಯೂಸ್ ನೌ ಸಂಪಾದಕ ವಸಂತ ಬಿ ಈಶ್ವರಗೆರೆ ಕೇಳಿದ ಪ್ರಶ್ನೆಗೆ ಉತ್ತರಿಸಿದಂತ ಮಾಜಿ ಸಚಿವ ಹರತಾಳು ಹಾಲಪ್ಪ, ಸರ್ಕಾರದ ನಿಲುವು ಸರಿಯಾಗಿದೆ. ನಾನು ಸಿದ್ಧರಾಮಯ್ಯ ಹಿರಿಯ ರಾಜಕಾರಣಿ, ಉತ್ತಮ ಆಡಳಿತದ ಚಾಕಚಕ್ಯತೆ ಹೊಂದಿರೋದು ಅಂದುಕೊಂಡಿದ್ದೇನೆ. ಆದ್ರೇ ಅಂತಹ ಕುಟುಂಬದವರೇ 14 ಮುಡಾ ನಿವೇಶನ ಪಡೆದ ಅಕ್ರಮ ಬೆಳಕಿಗೆ ಬಂದಿದೆ. ನ್ಯಾಯಾಂಗ ತನಿಖೆಗೆ ವಹಿಸಲಾಗಿದೆ. ತನಿಖೆ ನಡೆಯಲಿ, ಸತ್ಯ ಹೊರ ಬರಲಿ ಅಂತ ಹೇಳಿದರು.
ಡೆಂಗ್ಯೂ ಚಿಕಿತ್ಸೆಗಾಗಿ ಬೆಡ್ ಹೆಚ್ಚಳಕ್ಕೆ ಎಸಿಗೆ ಆಗ್ರಹ
ಇದೇ ಸಂದರ್ಭದಲ್ಲಿ ಸಾಗರ ಉಪ ವಿಭಾಗಾಧಿಕಾರಿ ಯತೀಶ್ ಅವರನ್ನು ಭೇಟಿಯಾದಂತ ಮಾಜಿ ಸಚಿವ ಹರತಾಳು ಹಾಲಪ್ಪ ಅವರು, ಸಾಗರದಲ್ಲಿ ಡೆಂಗ್ಯೂ ಕೇಸ್ ಹೆಚ್ಚಾಗುತ್ತಿವೆ. ಆದ್ರೇ ಪೀಡಿತರಾದಂತವರಿಗೆ ಚಿಕಿತ್ಸೆ ನೀಡೋದಕ್ಕೆ ಬೆಡ್ ಗಳ ಕೊರತೆ ಎದುರಾಗಿದೆ. ಇದಕ್ಕಾಗಿ ಕೊರೋನಾ ಸಮಯದಲ್ಲಿ ಮಾಡಿಕೊಂಡಂತೆ ಪರ್ಯಾಯ ಬೆಡ್ ಗಳ ವ್ಯವಸ್ಥೆ ಮಾಡಬೇಕು. ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಿ, ಡೆಂಗ್ಯೂ ಪೀಡಿತರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದಂತ ಎಸಿ ಯತೀಶ್ ಅವರು ಡೆಂಗ್ಯೂ ಪೀಡಿತರಿಗೆ ಚಿಕಿತ್ಸೆಗೆ ಕ್ರಮ ವಹಿಸಲಾಗುತ್ತಿದೆ. ನಿಯಂತ್ರಣ ಕ್ರಮವನ್ನು ಕೈಗೊಳ್ಳಲಾಗಿದೆ. ಬೆಡ್ ವ್ಯವಸ್ಥೆ ಮಾಡುವುದು ಮುಖ್ಯವಲ್ಲ. ಅದಕ್ಕಾಗಿ ಸಿಬ್ಬಂದಿಗಳನ್ನು ಒದಗಿಸುವುದು ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ತಾವು ನಿರಂತರ ಸಂಪರ್ಕದಲ್ಲಿ ಇದ್ದೇನೆ. ಶೀಘ್ರವೇ ಕಲ್ಯಾಣ ಮಂಟಪ, ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಪೀಡಿತರಿಗೆ ಚಿಕಿತ್ಸೆಗಾಗಿ ಬೆಡ್ ವ್ಯವಸ್ಛೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
HD ಕುಮಾರಸ್ವಾಮಿ ಸರ್ವಪಕ್ಷ ಸಭೆಗೆ ಬರದೇ ‘ಬಾಡೂಟಕ್ಕೆ’ ಹೋಗಿದ್ದು ದುರಂತ : ಸಚಿವ ಚೆಲುವರಾಯಸ್ವಾಮಿ