ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿಯ ವಿರುದ್ಧ ವಿಪಕ್ಷ ಬಿಜೆಪಿ ನಾಯಕರು ಮುಡಾದಿಂದ ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದರು. ಇದೀಗ ರಾಜ್ಯ ಸರ್ಕಾರದಿಂದ ಮುಡಾ ಅಕ್ರಮ ಕುರಿತಂತೆ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ.
ಈ ಕುರಿತಂತೆ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿವೇಶನ ಹಂಚಿಕೆ ವಿಷಯದಲ್ಲಿ ಆರೋಪಗಳು ಸರ್ಕಾರದ ಗಮನಕ್ಕೆ ಬಂದಿರುವುದಲ್ಲದೆ, ಈ ಕುರಿತು ದಿನ ಪತ್ರಿಕೆಗಳಲ್ಲಿ ಮಾಧ್ಯಮಗಳಲ್ಲಿಯೂ ಸಹ ವರದಿಯಾಗಿರುತ್ತದೆ. ಈ ಪುಕರಣದಲ್ಲಿ ವಿಚಾರಣೆ ನಡೆಸುವುದು ಸೂಕ್ತವೆಂದು ಮನಗಂಡು, Commission of Inquiry Act, 1952ರ ನಿಯಮ 3 ರ ಉಪನಿಯಮ (1) ರನ್ವಯ ಮಾನ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿಂದ ವಿಚಾರಣೆ ನಡೆಸಲು ವಿಚಾರಣಾ ಆಯೋಗವನ್ನು ರಚಿಸಲು ಸರ್ಕಾರವು ತೀರ್ಮಾನಿಸಿದೆ ಅಂತ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ, ಆರೋಪಗಳ ಬಗ್ಗೆ ವಿಚಾರಣೆಯನ್ನು ನಡೆಸಲು Commission of Inquiry Act, 1952ರ ನಿಯಮ 3ರ ಉಪನಿಯಮ (1)ರನ್ವಯ ಪುದತ್ತವಾದ ಅಧಿಕಾರದನ್ವಯ ಸರ್ಕಾರವು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಪಿ.ಎನ್.ದೇಸಾಯಿ, ರವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ರಚಿಸಿದೆ ಅಂತ ಹೇಳಿದ್ದಾರೆ.
ಸದರಿ ವಿಚಾರಣಾ ಆಯೋಗವು Commissions of Inquiry Act, 1952 ಹಾಗೂ Code of Civl Procedure ರಲ್ಲಿನ ಅವಕಾಶದಡಿ ವಿಚಾರಣೆ ನಡೆಸಲು ಎಲ್ಲಾ ಅಧಿಕಾರವನ್ನು ಹೊಂದಿರುತ್ತದೆ. ಹಾಗೂ ತನಿಖೆಯನ್ನು 06 ತಿಂಗಳೊಳಗಾಗಿ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸತಕ್ಕದ್ದೆಂದು ಸರ್ಕಾರವು ಅಪೇಕ್ಷಿಸುತ್ತದೆ. ವಿಚಾರಣಾ ಆಯೋಗದ Terms of Reference ಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದಿದ್ದಾರೆ.
ಈ ವಿಚಾರಣಾ ಆಯೋಗಕ್ಕೆ ಸಮಗ್ರ ಮಾಹಿತಿ/ದಾಖಲೆಗಳನ್ನು ಒದಗಿಸಿ ಆಯೋಗವು ವಿಚಾರಣೆಯನ್ನು ಪೂರ್ಣಗೊಳಿಸಲು ಹಾಗೂ ತಾಂತ್ರಿಕ ಸಲಹೆಗಾರರು/ಆರ್ಥಿಕ ಸಲಹೆಗಾರರು/ ಆಡಳಿತಾತ್ಮಕ ಸಲಹೆಗಾರರನ್ನು ಒದಗಿಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸಹಕರಿಸತಕ್ಕದ್ದು ಅಂತ ತಿಳಿಸಿದ್ದಾರೆ.
ವಿಚಾರಣೆ ಆಯೋಗಕ್ಕೆ ಸಂಬಂಧಪಟ್ಟಂತೆ ನಗರಾಭಿವೃದ್ಧಿ ಇಲಾಖೆಯ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಆಯೋಗವು ಕಾಲಾನುಕಾಲಕ್ಕೆ ವಿಚಾರಣೆಗಾಗಿ ಅಪೇಕ್ಷಿಸುವ ಎಲ್ಲಾ ಕಡತಗಳು/ ದಾಖಲಾತಿಗಳು/ ಇತ್ಯಾದಿಗಳನ್ನು ಒದಗಿಸತಕ್ಕದ್ದು ಹಾಗೂ ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು, ವಿಚಾರಣಾ ಆಯೋಗದೊಂದಿಗೆ ಸಂಪೂರ್ಣವಾಗಿ ಸಹಕರಿಸತಕ್ಕದ್ದು ಅಂತ ಸೂಚಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು