ಕಲಬುರಗಿ : ಕೃಷಿ ಜಮೀನೊಂದರಲ್ಲಿ ದುಷ್ಕರ್ಮಿಗಳು ಮಹಿಳೆಯೊಬ್ಬರನ್ನು ಹತ್ಯೆ ಮಾಡಿ ಸುಟ್ಟು ಹಾಕಿರುವ ಘಟನೆ ಕಮಲಾಪುರ ತಾಲೂಕಿನ ನಾಗೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಇದೀಗ ಹಳೆ ದ್ವೇಷದ ಹಿನ್ನೆಲೆ ಹತ್ಯೆ ಮಾಡಿರರಬಹುದೆಂದು ಶಂಕೆ ವ್ಯಕ್ತವಾಗುತ್ತಿದೆ.
ಹೌದು ಕಲಬುರಗಿ ಜಿಲ್ಲೆಯ ಕಮಲಾಪುರ್ ತಾಲೂಕಿನ ನಾಗೂರ ಗ್ರಾಮದ ಖಾಸಗಿ ಕೃಷಿ ಜಮೀನಿನ ದಂಡೆಯಲ್ಲಿ ಅರ್ಧ ಸುಟ್ಟಿರುವ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಒಂದು ದಿನ ಹಿಂದೆ ಈ ಕೊಲೆ ನಡೆದಿರಬಹುದೆಂಬ ಅನುಮಾನ ಹುಟ್ಟಿಕೊಂಡಿದೆ. ಕೊಲೆಯಾದ ಮಹಿಳೆಯ ವಿಳಾಸ ಮತ್ತು ಗುರುತು ಪತ್ತೆಯಾಗಿಲ್ಲ. ಆರೋಪಿಗಳು ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಈ ದುಷ್ಕೃತ್ಯ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಎಎಸ್ಪಿ ಬಿಂದುರಾಣಿ, ಪಿಎಸ್ಐ ಆಶಾ ರಾಠೋಡ, ಕಮಲಾಪುರ ಸಿಪಿಐ ವಿ.ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.