ಬೆಂಗಳೂರು : ನಾಳೆಯಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ಈ ಬಾರಿ ಅಧಿವೇಶದಲ್ಲಿ ಹಗರಣಗಳ ಬಗ್ಗೆ ಪ್ರಸ್ತಾಪಿಸಲು ವಿಪಕ್ಷಗಳಾದ ಬಿಜೆಪಿ-ಜೆಡಿಎಸ್ ನಿರ್ಧರಿಸಿವೆ. ಇದಕ್ಕೆ ಪ್ರತಿಯಾಗಿ ಗಟ್ಟಿಯಾಗಿ ನಿಲ್ಲಲು ಸಹ ಸಿದ್ದರಾಮಯ್ಯ ಸರ್ಕಾರ ಸನ್ನದ್ಧವಾಗಿದೆ.
ಇದಕ್ಕೆ ಪೂಕರಕವೆಂಬಂತೆ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆಯಾಗುವ ವಿಷಯಗಳಿಗೆ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳು ಖುದ್ದು ಹಾಜರಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಮಂಡಲ ಅಧಿವೇಶನಕ್ಕೆ ಪೂರ್ವಭಾವಿಯಾಗಿ ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಸಭೆ ನಡೆಸಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ವಿವಿಧ ಇಲಾಖೆಗಳಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇರುವ ವಿಷಯಗಳ ಕುರಿತು ಇಲಾಖಾ ಕಾರ್ಯದರ್ಶಿಗಳಿಂದ ಮುಖ್ಯಮಂತ್ರಿಗಳು ಸವಿಸ್ತಾರವಾಗಿ ಮಾಹಿತಿ ಪಡೆದರು. ಚರ್ಚೆಯ ಸಾಧ್ಯತೆ ಇರುವ ವಿಷಯಗಳ ಕುರಿತು ದತ್ತಾಂಶಗಳನ್ನು ಸಂಗ್ರಹಿಸಲು ಸಹ ಸೂಚನೆ ನೀಡಿದರು.
ಯಾವಗಲೂ ಮಾರ್ಚ್ ನಲ್ಲಿ ಲೇಖಾನುದಾನ ಪಡೆದು, ಮಳೆಗಾಲದ ಅಧಿವೇಶನದಲ್ಲಿ ಪೂರ್ಣ ಬಜೆಟ್ ಗೆ ಅನುಮೋದನೆ ಪಡೆಯಲಾಗುತ್ತಿತ್ತು. ಈ ಬಾರಿ ಸಂಪೂರ್ಣ ಬಜೆಟ್ಗೆ ಮಾರ್ಚ್ ನಲ್ಲಿಯೇ ಅನುಮೋದನೆ ದೊರೆತಿರುವ ಕಾರಣ ಇದು ಬಜೆಟ್ ಬಗ್ಗೆ ಚರ್ಚಿಸುವ ಅಧಿವೇಶನ ಅಲ್ಲ. ಯಾವಗಲೂ ಮಾರ್ಚ್ ನಲ್ಲಿ ಲೇಖಾನುದಾನ ಪಡೆದು, ಮಳೆಗಾಲದ ಅಧಿವೇಶನದಲ್ಲಿ ಪೂರ್ಣ ಬಜೆಟ್ ಗೆ ಅನುಮೋದನೆ ಪಡೆಯಲಾಗುತ್ತಿತ್ತು.
ಎಲ್ಲ ಕಾರ್ಯದರ್ಶಿಗಳೂ, ಇಲಾಖಾ ಮುಖ್ಯಸ್ಥರು ಅಧಿವೇಶನದಲ್ಲಿ ಹಾಜರಿರಬೇಕು. ಸಚಿವರಿಗೆ ಸಮರ್ಪಕವಾಗಿ ಮಾಹಿತಿ ನೀಡಬೇಕು. ಆಯಾ ಇಲಾಖಾ ಸಚಿವರು ಚರ್ಚೆಯ ವಿಷಯಗಳಿಗೆ ಉತ್ತರಿಸಬೇಕು. ಅಗತ್ಯವಿದ್ದರೆ ನಾನು ಮಧ್ಯಪ್ರವೇಶಿಸುತ್ತೇನೆ. ನಿಮ್ಮ ಇಲಾಖೆಯ ವಿಷಯ ಇದ್ದಾಗ ಕಾರ್ಯದರ್ಶಿಗಳು ಖುದ್ದು ಹಾಜರಿದ್ದು, ಸಚಿವರಿಗೆ ಸಹಕಾರ ನೀಡಬೇಕು. ಕೇವಲ ಅಧೀನ ಅಧಿಕಾರಿಗಳನ್ನು ಕಳುಹಿಸಿ ಗೈರು ಹಾಜರಾಗುವಂತಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.