ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇದೀಗ ಹಗರಣಗಳ ಸರಮಾಲೆಗಳೇ ಸುತ್ತಿಕೊಳ್ಳುತ್ತಿವೆ. ಕಳೆದ ಕೆಲವು ದಿನಗಳ ಹಿಂದೆ ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಅಲ್ಲದೆ ಬಾಗಲಕೋಟೆ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ಕುರಿತು ನಿನ್ನ ಬೆಳಕಿಗೆ ಬಂದಿತ್ತು. ಇದೀಗ ವಕ್ಫ್ ಬೋರ್ಡ್ ನಲ್ಲೂ ಕೂಡ ಕೋಟ್ಯಾಂತರ ಹಣ ಅಕ್ರಮ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ.
ಹೌದು ವಕ್ಫ್ ಬೋರ್ಡ್ ನಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ವಕ್ಫ್ ಬೋರ್ಡ್‌ನ ಮಾಜಿ ಸಿಇಒ ಝುಲ್ಫಿಕಾರುಲ್ಲಾ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮದ್ ಅಬ್ಬಾಸ್ ಕೊಟ್ಟ ದೂರಿನ ಆಧಾರ ಮೇಲೆ ಎಫ್‌ಐಆರ್ ದಾಖಲಾಗಿದೆ.
ವಕ್ಫ್ ಮಂಡಳಿ ಆಸ್ತಿ ಮಾರಾಟ ಸಂಬಂಧ 4 ಕೋಟಿ ರೂ. ಹಣ ಮಂಡಳಿ ಬ್ಯಾಂಕ್ ಖಾತೆಗೆ ಜಮೆಯಾಗಿತ್ತು. ಈ ಹಣವನ್ನು 2016ರಲ್ಲಿ ಚಿಂತಾಮಣಿಯ ವಿಜಯ ಬ್ಯಾಂಕ್‌ಗೆ ವರ್ಗಾವಣೆ ಮಾಡಿದ್ದ ಝುಲ್ಫಿಕಾರುಲ್ಲಾ ಸಿಇಒ ಹೆಸರಿನಲ್ಲಿ ಎರಡು ಚೆಕ್ ಮೂಲಕ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದರು. ಇದರಿಂದ ವಕ್ಫ್ ಮಂಡಳಿಗೆ 8 ಕೋಟಿ ರೂ.ನಷ್ಟ ಆಗಿದೆ ಎಂದು ದೂರು ನೀಡಲಾಗಿದೆ.
ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಒಂದೊಂದೇ ಹಗರಣಗಳು ಇದೀಗ ಹೊರಬರುತ್ತಿವೆ. ಈ ಒಂದು ಹಗರಣಗಳು ಬಿಜೆಪಿ ಅಧಿಕಾರದಲ್ಲಿದ್ದಾಗ ನಡೆದಿದ್ದವೊ ಅಥವಾ ಇದೀಗ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಮೇಲೆ ನಡೆದಿದೆಯೋ ಎಂಬುದರ ಕುರಿತು ಪೊಲೀಸರ ತನಿಖೆಯಲ್ಲಿ ಹೊರಬೀಳಬೇಕಷ್ಟೆ.