ಬೆಂಗಳೂರು : 2024-25 ನೇ ಸಾಲಿನಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಕಲಿಕಾ ಫಲಗಳ ಗುಣಾತ್ಮಕ ಕಲಿಕೆಗಾಗಿ ಹಾಗೂ ಹತ್ತನೇ ತರಗತಿ ಫಲಿತಾಂಶ ಉತ್ತಮ ಪಡಿಸುವ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2024-25 ನೇ ಸಾಲಿನಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಕಲಿಕಾ ಫಲಗಳ ಗುಣಾತ್ಮಕ ಕಲಿಕೆಗಾಗಿ ಹಾಗೂ ಹತ್ತನೇ ತರಗತಿ ಫಲಿತಾಂಶ ಉತ್ತಮ ಪಡಿಸುವ ಸಲುವಾಗಿ ಈ ಕೆಳಕಂಡಂತೆ ಕೆಲವು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದೆ. ಅದರಲ್ಲಿ ತಮ್ಮ ಜಿಲ್ಲೆಗೆ, ತಾಲೂಕಿಗೆ ಮತ್ತು ಶಾಲೆಗೆ ಸರಿಹೊಂದುವ ಅಂಶಗಳನ್ನು ಆಯ್ಕೆ ಮಾಡಿಕೊಂಡು ಮಾಸಿಕ ಕ್ರಿಯಾಯೋಜನೆಯನ್ನು ಮಾಡಿಕೊಂಡು ಅದರಂತೆ ಕ್ರಮವಹಿಸಿ ಅನುಪಾಲಿಸುವುದು. ಇದಕ್ಕಿಂತ ಉತ್ತಮ ಚಟುವಟಿಕೆಗಳಿದ್ದಲ್ಲಿ ತಮ್ಮ ಹಂತದಲ್ಲಿಯೇ ಅಳವಡಿಸಿಕೊಳ್ಳಬಹುದಾಗಿದೆ. ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ ಉಪನಿರ್ದೇಶಕರು ಆಡಳಿತ ಮತ್ತು ಉಪನಿರ್ದೇಶಕರು (ಅಭಿವೃದ್ಧಿ) ರವರು ಜಂಟಿಯಾಗಿ ಸಹಿಮಾಡಿ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಕಳುಹಿಸಿ ಪ್ರಗತಿಯನ್ನು ಅನುಪಾಲನೆ ಮಾಡುವುದು ಹಾಗೂ ಅನುಮೋದಿತ
ಕ್ರಿಯಾಯೋಜನೆಯನ್ನು ಡಿಎಸ್‌ಇಆರ್‌ಟಿ ಕಛೇರಿಗೆ ಕಳುಹಿಸಿ ಕೊಡುವುದು.
ಸೇತುಬಂಧ:- ಸೇತುಬಂಧ ಕಾರ್ಯಕ್ರಮದ ಅಂತ್ಯದಲ್ಲಿ ಸಾಫಲ್ಯ ಪರೀಕ್ಷೆಯ ಫಲಿತಾಂಶವನ್ನು ವಿಶ್ಲೇಷಿಸಿ ಶಾಲಾ ಹಂತದಲ್ಲಿ ವಿದ್ಯಾರ್ಥಿವಾರು ಕಲಿಕೆಯಲ್ಲಿ ಕಲಿಕಾಫಲ ಸಾಧಿಸದಿರುವ ಕಲಿಕಾಫಲಗಳಿಗೆ ಕ್ರಿಯಾ ಯೋಜನೆ ತಯಾರಿಸಿಕೊಂಡು ಪರಿಹಾರ ಬೋಧನೆಯೊಂದಿಗೆ ಅನುಪಾಲಿಸುವುದು ಅಥವಾ ಶಾಲಾ ತರಗತಿಯಲ್ಲಿಯೇ ಆ ಕಲಿಕಾಫಲಗಳನ್ನು ಗಮನದಲ್ಲಿಟ್ಟುಕೊಂಡು ನಿಧಾನಗತಿ ಕಲಿಕೆಯಲ್ಲಿರುವ ವಿದ್ಯಾರ್ಥಿಗಳಿಗೆ ವಿಷಯ ಸಮನ್ವಯತೆಯೊಂದಿಗೆ ತರಗತಿ ನಿರ್ವಹಣೆ ಮಾಡುವುದು.
ಫಲಿತಾಂಶಗಳ ವಿಶ್ಲೇಷಣೆ:- ಸೇತುಬಂಧ, ಘಟಕ ಪರೀಕ್ಷೆಗಳು, ರೂಪಣಾತ್ಮಕ
ಮೌಲ್ಯಮಾಪನ 1, 2, 3 ಮತ್ತು 4 ಹಾಗೂ ಸಂಕಲನಾತ್ಮಕ ಮೌಲ್ಯಮಾಪನ 1 ರ ಫಲಿತಾಂಶವನ್ನು ವಿಶ್ಲೇಷಿಸಿ ಕಲಿಕೆಯನ್ನು ಸಾಧಿಸದ ಮಕ್ಕಳಿಗೆ ಆಯಾ ವಿಷಯ ಶಿಕ್ಷಕರು ವಿದ್ಯಾರ್ಥಿವಾರು ಕ್ರಿಯಾಯೋಜನೆ ತಯಾರಿಸಿಕೊಂಡು ಅನುಪಾಲಿಸುವುದು. ಪಾಠ ಬೋಧನೆ ಹೊರತು ಪಡಿಸಿ ಮಕ್ಕಳ ಆಸಕ್ತಿಗೆ ಅನುಗುಣವಾಗಿ ವಿವಿಧ ಚಟುವಟಿಕೆಗಳ ಮೂಲಕ ಕಲಿಕಾಫಲ ಸಾಧನೆಗೆ ಕ್ರಮವಹಿಸುವುದು. (ಚಟುವಟಿಕೆಗಳನ್ನು ಸ್ಪರ್ಧೆ ವಿಭಾಗದಲ್ಲಿ ನಮೂದಿಸಿದೆ)
ಸ್ಪರ್ಧೆಗಳು:- ವಿದ್ಯಾರ್ಥಿಗಳ ಆಸಕ್ತಿಗನುಗುಣವಾಗಿ ಸ್ಪರ್ಧೆಗಳನ್ನು ಏರ್ಪಡಿಸುವುದು. ಉದಾ-
ವಿಜ್ಞಾನದ ಚಿತ್ರಗಳನ್ನು ಬಿಡಿಸಿ ಭಾಗಗಳನ್ನು ಗುರ್ತಿಸುವುದು, ಸಮಾಜ ವಿಜ್ಞಾನದ ನಕ್ಷೆ ಬಿಡಿಸಿ ಭಾಗಗಳನ್ನು ಗುರ್ತಿಸುವುದು, ಇವುಗಳನ್ನೇ ರಂಗೋಲಿ ಸ್ಪರ್ಧೆಯ ಮೂಲಕವೂ ಮಾಡಬಹುದು, ಅದೇ ರೀತಿ ಗಣಿತದಲ್ಲಿಯೂ ಮಾಡಬಹುದು. ಕಂಠಪಾಠಕ್ಕಿರುವ ಪದ್ಯಗಳನ್ನು ಹೇಳಿಸುವ ಹಾಗೂ ಬರೆಸುವ ಸ್ಪರ್ಧೆ, ಪ್ರಭಂಧ ಸ್ಪರ್ಧೆ, ಪ್ರಮೇಯಗಳನ್ನು ವಿವರಿಸುವ ಸ್ಪರ್ಧೆ, ರಸಪ್ರಶ್ನೆ (ಎಲ್ಲಾ ವಿಷಯಗಳಿಗೆ), ಚರ್ಚಾ ಸ್ಪರ್ಧೆ, ತಂಡಗಳನ್ನು ಮಾಡಿ ಒಂದು ತಂಡ ಪ್ರಶ್ನೆ ಕೇಳುವುದು ಇನ್ನೊಂದು ತಂಡ ಉತ್ತರಿಸುವುದು. ಅದೇ ರೀತಿ ಇನ್ನೊಂದು ತಂಡ ಪ್ರಶ್ನೆ ಕೇಳಿದಾಗ ಮತ್ತೊಂದು ತಂಡ ಉತ್ತರಿಸುವುದು. ಮಾದರಿಗಳನ್ನು ಮಾಡಿ ಪ್ರದರ್ಶಿಸುವುದು, ಮೆಟ್ರಿಕ್ ಮೇಳ, ವಿಜ್ಞಾನ ಮೇಳ, English Fest, ಪಠ್ಯವನ್ನು ನಾಟಕಗಳ ಮೂಲಕ ಪ್ರದರ್ಶಿಸುವುದು. ಸೂತ್ರಗಳನ್ನು ಬರೆದು ಹಾಕಿ ಬಿಡಿಸುವುದು, ಸಂಕೇತಗಳ ವಿವರಣೆ ನೀಡುವುದು, ನಕ್ಷೆಯಲ್ಲಿ ಸ್ಥಳಗಳನ್ನು ಗುರ್ತಿಸುವುದು, ಪ್ರಾರ್ಥನಾ ಅವಧಿಯಲ್ಲಿ ಕವಿ ಕಾವ್ಯ ಪರಿಚಯ, ವಿಜ್ಞಾನಿಗಳ, ಇತಿಹಾಸಕಾರರ, ಗಣಿತಜ್ಞರ ಪರಿಚಯ ಮಾಡಿಸುವುದು’ ಇತ್ಯಾದಿ
ಪಠ್ಯವನ್ನು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಯೋಜನೆ :- ಎಲ್ಲಾ ವಿಷಯಗಳ ಪಾಠಗಳನ್ನು ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ವಾರ್ಷಿಕ ಪಾಠ ಹಂಚಿಕೆಯಲ್ಲಿ ಯೋಜಿಸಿಕೊಳ್ಳುವುದು. ಇದಕ್ಕಾಗಿ ಪ್ರತ್ಯೇಕ ವೇಳಾಪಟ್ಟಿ ತಯಾರಿಸಿಕೊಂಡು ವಿಶೇಷ ತರಗತಿಗಳ ನಿರ್ವಹಣೆ ಮಾಡುವುದು.
ಸರಣಿ ಪರೀಕ್ಷೆಗಳು:- ಡಿಸೆಂಬರ್ 2024 ರ ಅಂತ್ಯಕ್ಕೆ ಪಠ್ಯವನ್ನು ಪೂರ್ಣಗೊಳಿಸಿದ ನಂತರ
ಶಾಲಾ ಹಂತದಲ್ಲೇ ಪ್ರತಿ ವಿಷಯದ ಎಲ್ಲಾ ಅಧ್ಯಾಯಗಳಿಗೆ ಹತ್ತು ಹತ್ತು 1 ಮತ್ತು 2 ಅಂಕದ ಆಧ್ಯತಾ ಪ್ರಶ್ನೆಗಳನ್ನು ತೆಗೆದು ಅವುಗಳ ಕಲಿಕೆಗೆ ಕ್ರಮವಹಿಸುವುದು. ಸದರಿ ಪ್ರಶ್ನೆಗಳನ್ನು ಸರಣಿ ಪರೀಕ್ಷೆಗಳ ಮೂಲಕ ನೀಡಿ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು. ಬೆಳಗಿನ ಅವಧಿಯಲ್ಲಿ ಪರೀಕ್ಷೆಗಳನ್ನು ನಡೆಸಿ ಮಧ್ಯಾನ್ಹದ ಅವಧಿಯಲ್ಲಿ ಸದರಿ ಪ್ರಶ್ನೆ ಪತ್ರಿಕೆಯನ್ನು ಮಕ್ಕಳ ಸಮ್ಮುಖದಲ್ಲಿ ಬಿಡಿಸುವುದು. ಸಂಜೆ ಗುಂಪು ಚರ್ಚೆಯಲ್ಲಿ ಅದೇ ಪ್ರಶ್ನೆಗಳನ್ನು ಗುಂಪಿನ ನಾಯಕರ ಮೂಲಕ ಪ್ರತಿ ವಿದ್ಯಾರ್ಥಿಗೆ ಕೇಳಿ ಉತ್ತರ ಪಡೆಯುವುದು. ಇದೇ ರೀತಿ ಎಲ್ಲಾ ವಿಷಯಗಳಿಗೆ ಮಾಡಿಸುವುದರಿಂದ ಮಕ್ಕಳಲ್ಲಿ ಕಲಿಕಾ ಫಲ ಸಾಧಿಸಲು ಸಾಧ್ಯವಾಗುತ್ತದೆ. ಮುಂದುವರೆದು ಅಧ್ಯಾಯವಾರು ತೆಗೆದ ಎಲ್ಲಾ ಪ್ರಶ್ನೆಗಳು ಮುಗಿಯುವ ವರೆಗೂ ಹೀಗೆಯೇ ಮುಂದುವರೆಯುವುದು. ನಂತರ ಮುಂದುವರೆದು ತರಗತಿ ಅವಧಿಯಲ್ಲಿಯೇ ಅದೇ ಪ್ರಶ್ನೆಗಳನ್ನು ನೀಡಿ ಕಪ್ಪುಹಲಗೆಯ ಮೇಲೆ ಬರೆಯಲು ತಿಳಿಸುವುದು. ಇದರಿಂದ ಪರೀಕ್ಷಾ ಭಯ ಕಡಿಮೆಯಾಗುತ್ತದೆ. ಮುಂದುವರೆದು ಇದೇ ಪ್ರಶ್ನೆಗಳಿಗೆ ತರಗತಿ ಅವಧಿಯಲ್ಲಿಯೇ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸುವುದು. ಮಕ್ಕಳನ್ನು ಗುಂಪುಮಾಡಿ ಒಂದು ಗುಂಪಿನವರು ಇನ್ನೊಂದು ಗುಂಪಿಗೆ ಪ್ರಶ್ನೆ ಕೇಳಿ ಉತ್ತರ ಪಡೆಯುವುದು. ಇಲ್ಲಿ ಮಕ್ಕಳಿಗೆ ಪುಸ್ತಕ ನೋಡಿಕೊಂಡೇ ಉತ್ತರ ಹೇಳಲು ಅವಕಾಶ ಕಲ್ಪಿಸುವುದು. ಪ್ರತಿ ದಿನ ಗುಂಪಿನ ಸದಸ್ಯರನ್ನು ಬದಲಾಯಿಸುವುದು.
ಪ್ರತಿ ತರಗತಿಯಲ್ಲಿ ಮಕ್ಕಳ ಬರವಣಿಗೆಗೆ ಅನುಕೂಲವಾಗುವಂತೆ ಇಡೀ ತರಗತಿಯ ಗೋಡೆಯನ್ನು ಕಪ್ಪುಹಲಗೆಯಾಗಿ ಪರಿವರ್ತಿಸಿ ವಿದ್ಯಾರ್ಥಿಗಳು ಆಯಾ ವಿಷಯದ ಸಮಸ್ಯೆ ಮತ್ತು ಕಲಿಕೆಯ ದೃಡೀಕರಣವನ್ನು ಬರವಣಿಗೆಯ ಮೂಲಕ ಅದೇ ಕಪ್ಪುಹಲಗೆಯಲ್ಲಿ ಅಭ್ಯಾಸ ಮಾಡಲು ಅನುಕೂಲ ಕಲ್ಪಿಸುವುದು.
ಪೂರ್ವ ಸಿದ್ಧತಾ ಪರೀಕ್ಷೆ:- ಪೂರ್ವಸಿದ್ಧತಾ ಪರೀಕ್ಷೆಗೆ ಮುನ್ನ ಹಿಂದಿನ 3 ಅಥವಾ 4 ವರ್ಷಗಳ ಎಲ್ಲಾ ವಿಷಯಗಳ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಪ್ರಶ್ನೆಗಳನ್ನು ಬಿಡಿಸಲು ಕ್ರಮವಹಿಸುವುದು. ಮಕ್ಕಳು ಈಗ ಪರೀಕ್ಷೆಗೆ ಸಿದ್ದರಾಗಿರುತ್ತಾರೆ. ಇದಾದ ನಂತರ ಇಲಾಖೆಯಿಂದ ನಡೆಸುವ ಪೂರ್ವಸಿದ್ಧತಾ ಪರೀಕ್ಷೆಯನ್ನು ನಡೆಸಿ ವಿಶ್ಲೇಷಿಸುವುದು. ಇನ್ನೂ ಯಾವ ಮಕ್ಕಳು ಯಾವ ವಿಷಯದ ಯಾವ ಕಲಿಕಾ ಫಲದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನು ಅರಿತು ಅವರಿಗೆ ಪ್ರತ್ಯೇಕ ಚಟುವಟಿಕೆಗಳನ್ನು ನೀಡುವುದು.
ತಾಯಂದಿರ /ಪೋಷಕರ ಸಭೆ :- ಎಲ್ಲಾ ವಿದ್ಯಾರ್ಥಿಗಳ ತಾಯಂದಿರ ಸಭೆಯನ್ನು ಕರೆದು ಮಕ್ಕಳಿಗೆ ಅಧ್ಯಯನ ಮಾಡಲು ಒತ್ತಡ ಹೇರದಂತೆ ತಿಳಿಸುವುದು. ಆದರೆ ಓದಲು ಪ್ರೇರೇಪಿಸುವಂತೆ ತಾಯಂದಿರಿಗೆ / ಪೋಷಕರಿಗೆ ತಿಳಿಸುವುದು. ಪಾಠದ ಜೊತೆಗೆ ಆಟದಲ್ಲೂ ಮಕ್ಕಳು ಭಾಗವಹಿಸುವಂತೆ ಅವಕಾಶ ಕಲ್ಪಿಸುವುದು. ಆಟದಿಂದ ಮಕ್ಕಳ ಮನಸ್ಸು ತಿಳಿಗೊಳ್ಳುವುದರಿಂದ ಯಾವಾಗಲೂ ಓದು ಓದು ಎಂದು ಹೇಳುವ ಬದಲು ಸ್ವಲ್ಪ ಸಮಯವನ್ನು ಮಕ್ಕಳಿಗೆ ಅವರದೇ ಆದ ಉತ್ತಮ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದು. ಬೆಳಿಗ್ಗೆ ಮಕ್ಕಳನ್ನು ಎಬ್ಬಿಸಿ ವ್ಯಾಸಂಗ ಮಾಡಲು ಕ್ರಮವಹಿಸಲು ತಿಳಿಸುವುದು. ಮಕ್ಕಳ ಬಗ್ಗೆ ವಿಶೇಷ ಗಮನಹರಿಸುವಂತೆ ತಾಯಂದಿರಿಗೆ ತಿಳಿಸುವುದು. ಮಕ್ಕಳನ್ನು ಹೀಯಾಳಿಸುವ, ಕೀಳರಿಮೆಯುಂಟು ಮಾಡುವ ಬದಲು ಪ್ರೇರೇಪಿಸಲು ತಿಳಿಸುವುದು. ಪೋಷಕರು ಮಕ್ಕಳೊಂದಿಗೆ ಆತ್ಮೀಯತೆಯಿಂದ ಇರುವಂತೆ ತಿಳಿಸುವುದು. ಇತ್ತೀಚಿನ ದಿನದ ಮಕ್ಕಳು ತುಂಬಾ ಸೂಕ್ಷ್ಮ ಮತಿಗಳಾಗಿದ್ದು ಅವರಿಗೆ ಅರಿವಿಲ್ಲದಂತೆ ಅವರ ಚಲನ ವಲನ ಗಮನಿಸುತ್ತಿರುವಂತೆ ಹಾಗೂ ಯಾವುದೇ ಕಾರಣಕ್ಕೂ ಮಕ್ಕಳು ಒತ್ತಡಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಲು ತಿಳಿಸುವುದು.
ಮನೆ ಮನೆ ಭೇಟಿ :- ಮಕ್ಕಳ ಶಿಕ್ಷಕರ ಬಾಂಧವ್ಯ ಉತ್ತಮವಾಗಿದ್ದರೆ ಮಕ್ಕಳು ಶಿಕ್ಷಕರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಆದುದರಿಂದ ಮಕ್ಕಳನ್ನು ಸ್ನೇಹಯುತವಾಗಿ ಮಾತನಾಡಿಸುವುದು. ಆಗಾಗ ಪೋಷಕರ ಸಮ್ಮುಖದಲ್ಲಿ ಮನೆಮನೆ ಭೇಟಿ ನೀಡುವುದರಿಂದ ಮಕ್ಕಳಿಗೆ ಶಿಕ್ಷಕರ ಬಗ್ಗೆ ಒಳ್ಳೆಯ ಭಾವನೆ ಬರಲು ಸಹಾಯವಾಗುತ್ತದೆ. ಶಾಲೆಗೆ ಗೈರು ಹಾಜರಾಗುವುದೂ ಕಡಿಮೆಯಾಗುತ್ತದೆ. ಮಕ್ಕಳಿಗೆ ಹೇಗೆ ಓದಬೇಕು? ಓದಲು ಹೇಗೆ ವೇಳಾಪಟ್ಟಿ ತಯಾರಿಸಿಕೊಳ್ಳಬೇಕು? ವಿಷಯಗಳ ಮುಖ್ಯಾಂಶಗಳನ್ನು ಹೇಗೆ ಪಟ್ಟಿ ಮಾಡಿಕೊಳ್ಳಬೇಕೆಂಬ ಬಗ್ಗೆ ಮಾರ್ಗದರ್ಶನ ನೀಡುವುದು ಅಗತ್ಯ. ಜೊತೆಗೆ ಮನೆಯಲ್ಲಿ Learning Corner ಸೃಜನೆ / ಓದುವ ಮೂಲೆಯ ಪರಿಕಲ್ಪನೆ ಹಾಗೂ ಅದರ ಮಹತ್ವವನ್ನು ಪೋಷಕರಿಗೆ ತಿಳಿಸುವುದು. ಪೋಷಕರಿಗೆ ಮಕ್ಕಳ ಕಲಿಕೆಯ ಕುರಿತು ನಿಯಮಿತವಾಗಿ ಕರೆ ಮಾಡುವುದು. ಇಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ಕ್ರಮವಹಿಸುವುದು.
ವಿಶೇಷ ತರಗತಿ:- ಶಾಲಾ ಪ್ರಾರಂಭದ ದಿನಗಳಿಂದಲೇ ಬೆಳಗಿನ ಹೊತ್ತು ಪ್ರಾರ್ಥನಾ ಅವಧಿಗೆ
ಮುನ್ನ ಗಣಿತ, ಇಂಗ್ಲೀಷ್ ಮತ್ತು ವಿಜ್ಞಾನ ವಿಷಯಗಳಿಗೆ ಒತ್ತು ನೀಡಿ ವಿಶೇಷ ತರಗತಿಗಳನ್ನು ತೆಗೆದುಕೊಳ್ಳುವುದು. ಮಕ್ಕಳು ಬೆಳಗಿನ ಅವಧಿಯಲ್ಲಿ ಸ್ವಚ್ಛ ಮನಸ್ಸಿನಿಂದ, ಚಂಚಲತೆ ಇಲ್ಲದೆ ಉತ್ತಮವಾಗಿ ಕಲಿಯುತ್ತಾರೆ ಹಾಗೂ ಇದರಿಂದ ಡಿಸೆಂಬರ್ ಅಂತ್ಯದೊಳಗೆ ಪಠ್ಯವನ್ನು ಪೂರ್ಣಗೊಳಿಸಲೂ ಸಹಾಯವಾಗುತ್ತದೆ.
ಗುಂಪು ಓದು/ಕಲಿಕೆ :- ಪ್ರತಿ ವಿಷಯದ ಎಲ್ಲಾ ಅಧ್ಯಾಯಗಳಿಗೆ ಹತ್ತು ಹತ್ತು 1 ಮತ್ತು 2
ಅಂಕದ ಆಧ್ಯತಾ ಪ್ರಶ್ನೆಗಳನ್ನು ತೆಗೆದು ಅವುಗಳ ಕಲಿಕೆಗೆ ಕ್ರಮವಹಿಸುವುದು ಪ್ರಾರಂಭದ ದಿನಗಳಿಂದಲೇ ಗುಂಪು ಓದಿಗೆ ಆಧ್ಯತೆ ನೀಡುವುದು. ಮಕ್ಕಳನ್ನು ವಿವಿಧ ಗುಂಪುಗಳನ್ನು ಮಾಡಿ ಆ ಗುಂಪಿಗೆ ಒಬ್ಬರು ವಿದ್ಯಾರ್ಥಿಯನ್ನು ನಾಯಕರನ್ನಾಗಿ ಮಾಡಿ ಅವರ ಉಸ್ತುವಾರಿಯಲ್ಲಿ ಆಯಾ ವಿಷಯ ಶಿಕ್ಷಕರ ಮಾರ್ಗದರ್ಶನದಲ್ಲಿ ಗುಂಪು ಓದನ್ನು ಮಾಡಿಸುವುದು. ಆಯಾ ದಿನ ಮಾಡಿದ
ವಿಷಯ ಬೋಧನೆಗೆ ಸಂಬಂಧಿಸಿದಂತೆಯೇ ಗುಂಪು ಓದನ್ನು ಮಾಡಿಸುವುದು.
ಓದುವ ಕಾರ್ಡ್ ತಯಾರಿಸಿಕೊಂಡು ಬಳಸುವುದು. 5 ರಿಂದ 6 ಮಕ್ಕಳ ಗುಂಪನ್ನು ಮಾಡಿಕೊಂಡು ಅದಕ್ಕೊಬ್ಬರು ನಾಯಕರನ್ನು ಮಾಡಿ ಪ್ರತೀ ಘಟಕಕ್ಕೂ 4 ರಿಂದ 5 ಕಾರ್ಡ್ ತಯಾರಿಸಿ ಅವುಗಳಲ್ಲಿ ಒಂದು ಅಂಕದ, ಎರಡು ಅಂಕದ, ಮೂರು ಅಂಕದ ಹಾಗೂ ನಾಲ್ಕು ಅಂಕದ ಪಶೋತ್ತರಗಳನ್ನು ತಯಾರಿಸಿ ಆ ಕಾರ್ಡುಗಳನ್ನು ಗುಂಪಿನ ನಾಯಕರಿಗೆ ನೀಡಿ ಅಭ್ಯಸಿಸಲು ಕ್ರಮವಹಿಸುವುದು. ಈ ರೀತಿಯ ಕಾರ್ಡ್‌ಗಳ ತಯಾರಿಕೆಗೆ ಮಕ್ಕಳನ್ನು ತೊಡಿಗಿಸಿಕೊಳ್ಳಬಹುದು.
ಪ್ರಯೋಗಗಳು / ಪ್ರಾಯೋಗಿಕ ಪಾಠ / ಯೋಜನೆಗಳನ್ನು ನೀಡುವುದು :-
ಶಾಲೆಗಳಲ್ಲಿ
ಮಕ್ಕಳ ಅನುಭವಾತ್ಮಕ ಕಲಿಕೆಗೆ ಆಧ್ಯತೆ ನೀಡುವುದು. ಅದಕ್ಕಾಗಿ ಪ್ರಾಯೋಗಿಕ ಪಾಠಗಳ ಮೂಲಕ, ಮಕ್ಕಳೇ ಸ್ವತಃ ವಿಜ್ಞಾನದ ಪ್ರಯೋಗಗಳನ್ನು ಮಾಡುವ ಮೂಲಕ, ಗಣಿತದ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಕಲಿಕಾ ಫಲ ಸಾಧನೆಗೆ ಅವಕಾಶ ಕಲ್ಪಿಸುವುದು. ಕೆಲವು ಸಂದರ್ಭಗಳಲ್ಲಿ ಪಠ್ಯಕ್ಕೆ ಸಂಬಂಧಿಸಿದಂತೆ ಕಿರು ಪ್ರವಾಸ ಕೈಗೊಂಡು ವೀಕ್ಷಿಸಲು ಅವಕಾಶ ಕಲ್ಪಿಸುವುದು. ಮೆಟ್ರಿಕ್ ಮೇಳ, ವಿಜ್ಞಾನ ಮೇಳ, ಕಲಿಕೋಪಕರಣಗಳ ಪ್ರದರ್ಶನ, English Fest, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಮಕ್ಕಳು ಸ್ವತಃ ಭಾಗವಹಿಸಿ ಅನುಭವ ಪಡೆಯಲು ಕ್ರಮವಹಿಸುವುದು. ಮಕ್ಕಳಿಗೆ ಪ್ರತಿ ವಿಷಯದಲ್ಲೂ ವಿಷಯಾಂಶವನ್ನು ನೀಡಿ ಮಕ್ಕಳೇ ಶಿಕ್ಷಕರಾಗಿ ವಿಷಯ ಮಂಡನೆ ಮಾಡುವುದು. ವಿಷಯ ಮಂಡನೆಯ ನಂತರ ಸದರಿ ವಿದ್ಯಾರ್ಥಿಗೆ ಪ್ರಶ್ನೆಗಳನ್ನು ಕೇಳುವುದು. ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಲು ಸಹಾಯವಾಗುತ್ತದೆ. ಇದರಿಂದ ನೋಡಿ ಕಲಿ ಮಾಡಿ ತಿಳಿಯುವುದರ ಮೂಲಕ ಮಕ್ಕಳಲ್ಲಿ ಶಾಶ್ವತ ಕಲಿಕೆ ಉಂಟಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಮಕ್ಕಳಿಗೆ ಯೋಜನೆಗಳನ್ನು (Project work) ನೀಡುವುದರಿಂದ ಮಕ್ಕಳು ಚಟುವಟಿಕೆಯಲ್ಲಿ ಭಾಗವಹಿಸಿ ನೋಡುವುದರ ಮೂಲಕ, ಮಾಡುವುದರ ಮೂಲಕ ಅನುಭವದ ಜೊತೆಗೆ ಕಲಿಕೆ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮವಹಿಸುವುದು.