ಬೆಂಗಳೂರು : ತಮಿಳುನಾಡಿಗೆ ನೀರು ಬಿಡುವಂತೆ ಆದೇಶ ಹೊರಡಿಸುವ ನಿರ್ವಹಣಾ ಸಮಿತಿ ನಮಗೆ ಬೇಡ. ಕಾವೇರಿ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಜೈಲ್ ಭರೋ ಚಳುವಳಿ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಕಾವೇರಿ ನಿರ್ವಹಣಾ ಸಮಿತಿ ಪ್ರತಿದಿನ 1 ಟಿಎಂಸಿ, ಜು.31ರವರೆಗೂ ಬಿಡುಗಡೆ ಮಾಡಬೇಕೆಂದು ಆದೇಶ ನೀಡಿದ್ದಾರೆ. ಇದು ನಿಜವಾಗ್ಲೂ ಕರ್ನಾಟಕಕ್ಕೆ, ನಮ್ಮ ರೈತರಿಗೆ ಅನ್ಯಾಯವಾಗಿದೆ. ನಮ್ಮ ಕೆರೆಗಳಲ್ಲಿ ನೀರಿಲ್ಲ, ನಮ್ಮ ಬೆಳೆಗಳು ನಾಶವಾಗ್ತಿವೆ. ಎಲ್ಲಾ ಜಲಾಶಯಗಳು ಸದ್ಯ 60 ಟಿಎಂಸಿ ನೀರು ಇರಬಹುದು.
ಈಗಿನ ಪರಿಸ್ಥಿತಿಯಲ್ಲಿ 90-95 ಟಿಎಂಸಿ ನೀರು ಇರಬೇಕಿತ್ತು. ಆದರೆ, ನೀರು ತುಂಬಾ ಕಡಿಮೆ ಇದ್ದರೂ ನಿರ್ವಹಣಾ ಪ್ರಾಧಿಕಾರ ಕಾವೇರಿ ಜಲಾಶಯದಿಂದ ನೀರು ಬಿಡುವಂತೆ ಆದೇಶ ಹೊರಡಿಸುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮಿಳುನಾಡಿನವರು ಭಾರತ ದೇಶದಲ್ಲಿ ಇದ್ದೀವಿ ಅಂತ ಅನ್ಕೊಂಡಿಲ್ಲ. ಕರ್ನಾಟಕ ಮೇಲೆ ತಮಿಳುನಾಡಿನ ಎಲ್ಲ ಮುಖ್ಯಮಂತ್ರಿಗಳು ವಿರೋಧ ಮಾಡಿಕೊಂಡೇ ಬರುತ್ತಿದ್ದಾರೆ.
ಮೇಕೆದಾಟು ಬಗ್ಗೆ ಸರ್ಕಾರ ನಿಲುವು ಏನು? ಮೇಕೆದಾಟು ಪಾದಯಾತ್ರೆ ಮಾಡಿದ್ರಿ ಅಲ್ವಾ? ನಿಮ್ಮ ಮಾತಿನಂತೆ ನಡೆದುಕೊಳ್ಳಬೇಕು. ಮೇಕೆದಾಟು ಆಗಬೇಕು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಸಜ್ಜಾಗ್ತಿವೆ. ಎಲ್ಲಾ ಕನ್ನಡಪರ ಸಂಘಟನೆಗಳ ಜೊತೆ ಸಭೆ ಮಾಡ್ತಿವಿ. ಜೈಲು ಭರೋ ಚಳವಳಿ ಮಾಡ್ತಿವಿ. ತಮಿಳುನಾಡಿನ ವಿರುದ್ಧ ಮತ್ತಷ್ಟು ದ್ವೇಷ ಸೃಷ್ಟಿ ಆಗಬಹುದು ಎಂದು ವಾಟಾಳ್ ನಾಗರಾಜ್ ಹೇಳಿದರು.