ಹುಬ್ಬಳ್ಳಿ : ಮಳೆಗಾಲದ ಪ್ರಯುಕ್ತ ವಿಶ್ವವಿಖ್ಯಾತ ಜೋಗ್ ಫಾಲ್ಸ್ ವೀಕ್ಷಣೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಆರಂಭಿಸಲಾದ ವಿಶೇಷ ಬಸ್ಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ.ಹಾಗಾಗಿ ಹೆಚ್ಚಿನ ಬೇಡಿಕೆ ಬಂದಿರುವುದರಿಂದ ಬಸ್ಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ್ ತಿಳಿಸಿದ್ದಾರೆ.
ವಾರಂತ್ಯದಲ್ಲಿ ಜುಲೈ 14 ರಿಂದ ಪ್ರತಿ ಭಾನುವಾರ ಒಂದು ಮಲ್ಟಿ ಆಕ್ಸೆಲ್ ವೋಲ್ವೋ ಐರಾವತ ಎಸಿ ಹಾಗೂ ಒಂದು ರಾಜಹಂಸ ವಿಶೇಷ ಬಸ್ನ ವ್ಯವಸ್ಥೆ ಮಾಡಲಾಗಿತ್ತು. ಖಾಸಗಿ, ವೈಯಕ್ತಿಕ ವಾಹನ ಪ್ರಯಾಣಕ್ಕಿಂತ ಹೆಚ್ಚು ಆರಾಮದಾಯಕ ಹಾಗೂ ಮಿತವ್ಯಯಕರವಾಗಿರುವುದರಿಂದ ಮಾಹಿತಿ ಪ್ರಕಟಿಸಿದ 48 ತಾಸುಗಳಲ್ಲಿ ಎರಡೂ ಬಸ್ಗಳು ಭರ್ತಿಯಾಗಿದ್ದು, ಹೆಚ್ಚುವರಿ ಬಸ್ಗಳಿಗಾಗಿ ಸಾರ್ವಜನಿಕರಿಂದ ನಿರಂತರ ಬೇಡಿಕೆ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಮತ್ತೊಂದು ಮಲ್ಟಿ ಆ್ಯಕ್ಸಲ್ ವೋಲ್ವೋ ಎಸಿ ಐರಾವತ ಬಸ್ ಹಾಗೂ ರಾಜಹಂಸ ಬಸ್ನ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ. www.ksrtc.in ಅಥವಾ KSRTC Mobile App ಮೂಲಕ ಆನ್ಲೈನ್ನಲ್ಲಿ ಹಾಗೂ ಹೊಸೂರು ಬಸ್ ನಿಲ್ದಾಣ ಮತ್ತು ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ರಾಜಹಂಸ ಬಸ್ಗೆ ಕನಿಷ್ಠ 35 ಹಾಗೂ ವೋಲ್ವೊ ಬಸ್ಗೆ ಕನಿಷ್ಟ 45 ಜನ ಪ್ರಯಾಣಿಕರು ಇದ್ದಲ್ಲಿ ಅವರು ಬಯಸಿದ ದಿನ ಹಾಗೂ ಸಮಯಕ್ಕೆ ವಿಶೇಷ ಬಸ್ನ ವ್ಯವಸ್ಥೆ ಮಾಡಲಾಗುತ್ತದೆ. ಆಸಕ್ತರು ದೂರವಾಣಿ ಸಂಖ್ಯೆ 7760 991682 / 7760 991674 ರಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್. ರಾಮನಗೌಡರ್ ಮಾಹಿತಿ ನೀಡಿದ್ದಾರೆ.