ಬೆಂಗಳೂರು: “ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಆರ್ಥಿಕ ಸಂಕಷ್ಟ ಎದುರಾಗಿಲ್ಲ” ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎಂದುರಾಗಿದೆ ಎಂಬ ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೆಪಿಸಿಸಿ ಕಚೇರಿ ಬಳಿ ಗುರುವಾರ ಗಮನ ಸೆಳೆದಾಗ ಅವರು ಹೀಗೆ ಉತ್ತರಿಸಿದರು.
“ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಸಂಕಷ್ಟವಿಲ್ಲ. ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದು, ಗ್ಯಾರಂಟಿ ಯೋಜನೆಗಳು ಏನನ್ನೂ ಮುಳುಗಿಸಿಲ್ಲ. ಹೀಗಾಗಿ ನಾವು ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ. ಕಳೆದ ವರ್ಷ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಅನ್ನು ನಾವು ಪುನರ್ ಪರಿಶೀಲಿಸಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೆವು. ಈ ಬಾರಿಯ ಬಜೆಟ್ ನಲ್ಲಿ 50 ಸಾವಿರ ಕೋಟಿಗೂ ಹೆಚ್ಚು ಹಣ ಮೀಸಲಿಟ್ಟಿದ್ದೇವೆ. ನಾವು ಮತಕ್ಕಾಗಿ ಗ್ಯಾರಂಟಿ ಯೋಜನೆ ಜಾರಿ ಮಾಡಿಲ್ಲ. ಜನರ ಬದುಕಿನಲ್ಲಿ ಬದಲಾವಣೆ ತರಲು ಈ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬೆಲೆ ಏರಿಕೆಯಿಂದ ಜನರಿಗೆ ತೊಂದರೆಯಾಗಿತ್ತು. ಮುಂದಿನ ದಿನಗಳಲ್ಲಿ ಜನ ನಮಗೆ ಸ್ಪಂದಿಸಲಿದ್ದಾರೆ” ಎಂದು ತಿಳಿಸಿದರು.
ಹೆಚ್ಚಿನ ಮಳೆಗೆ ಪ್ರಾರ್ಥಿಸೋಣ:
ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಸಿಆರ್ ಡಬ್ಲ್ಯೂಸಿ ಸಭೆ ತೀರ್ಮಾನದ ಬಗ್ಗೆ ಕೇಳಿದಾಗ, “ಇನ್ನು ನಿರೀಕ್ಷಿತ ಮಟ್ಟದಲ್ಲಿ ನೀರಿನ ಸಂಗ್ರಹವಾಗಿಲ್ಲ. ಈ ಬಗ್ಗೆ ನಾನು ಈಗಲೇ ಏನು ಪ್ರತಿಕ್ರಿಯೆ ನೀಡುವುದಿಲ್ಲ. ಇನ್ನಷ್ಟು ಮಳೆ ಬೀಳಲಿ ಎಂದು ಎಲ್ಲರೂ ಪ್ರಾರ್ಥಿಸೋಣ” ಎಂದು ತಿಳಿಸಿದರು.
ನಾಳೆಯೂ ಸಭೆ ಮುಂದುವರಿಯಲಿದೆ:
ಇಂದಿನ ಎಐಸಿಸಿ ಸತ್ಯಶೋಧನಾ ಸಮಿತಿ ಸಭೆ ಬಗ್ಗೆ ಕೇಳಿದಾಗ, “ಲೋಕಸಭೆ ಚುನಾವಣೆ ಫಲಿತಾಂಶ ವಿಚಾರವಾಗಿ ಎಐಸಿಸಿ ಸತ್ಯಶೋಧನಾ ಸಮಿತಿ ಇಂದು ಶಾಸಕರು ಹಾಗೂ ಪದಾಧಿಕಾರಿಗಳ ಅಭಿಪ್ರಾಯ ಸಂಗ್ರಹಿಸಿದ್ದು, ನಾಳೆ ಪರಾಜಿತ ಅಭ್ಯರ್ಥಿಗಳು ಹಾಗೂ ಇತರ ನಾಯಕರ ಅಭಿಪ್ರಾಯ ಸಂಗ್ರಹಿಸಲಿದೆ. ನಂತರ ಈ ಸಮಿತಿಯು ಎಐಸಿಸಿಗೆ ತನ್ನ ವರದಿ ಸಲ್ಲಿಸಲಿದೆ” ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ‘ಗಣ್ಯರ ಸರ್ಕಾರಿ ವಾಹನ’ಗಳ ಮೇಲೆ ‘ರಾಷ್ಟ್ರಧ್ವಜ’ ಬಳಕೆ ಬಗ್ಗೆ ಮಹತ್ವದ ಆದೇಶ