ಬೆಂಗಳೂರು: ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಅಡಿ ಪ್ರತಿ ವರ್ಷ 436 ರೂ. ಪ್ರೀಮಿಯಂ ಪಾವತಿಸಿದರೆ, ಯಾವುದೇ ಕಾರಣದಿಂದ ಸಾವು ಸಂಭವಿಸಿದರೆ 2ಲಕ್ಷ ರೂ. ಪಾಲಿಸಿ ಹಣ ದೊರೆಯುವುದು ಅಂತ ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.
ಅವರು ಎರಡು ದಿನಗಳ ಕಾಲ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಿ ನಂತರ ಸಭೆಯನ್ನುದ್ದೇಶಿಸಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಾಧ್ಯಮದವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಅವರು ಮಾತನಾಡಿ, 18ರಿಂದ 50 ವರ್ಷದೊಳಗಿನವರು ಇದಕ್ಕೆ ಅರ್ಹರಿದ್ದಾರೆ. ಇದೇ ರೀತಿ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವಾರ್ಷಿಕ ರೂ. 20 ಪ್ರೀಮಿಯಂ ಪಾವತಿಸಿದರೆ, ಅಪಘಾತದಲ್ಲಿ ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ರೂ. 2ಲಕ್ಷ ರೂ. ಹಾಗೂ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ 1ಲಕ್ಷ ರೂ. ಪಾಲಿಸಿ ಮೊತ್ತ ದೊರೆಯಲಿದೆ.
18ರಿಂದ 70 ವರ್ಷದೊಳಗಿನವರು ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಈ ಕುರಿತು ಸಾರ್ವಜನಿಕರಿಗೆ ವ್ಯಾಪಕವಾದ ಮಾಹಿತಿಯನ್ನು ನೀಡುವ ಕಾರ್ಯ ಮಾಡಬೇಕು. ಇದುವರೆಗೆ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ 72.85 ಲಕ್ಷ ಜನರು ಹಾಗೂ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 1.74 ಕೋಟಿ ಜನರು ಇದ್ದಾರೆ ಎಂದು ಹೇಳಿದರು.