ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಹೆಚ್ಚಳವಾಗಿದ್ದು, ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆರೋಗ್ಯ ಇಲಾಖೆ, ಸಿಎಂ, ಡಿಸಿಎಂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕುರ್ಚಿ ಕಿತ್ತಾಟದಲ್ಲಿ ಡೆಂಗ್ಯೂ ನಿಯಂತ್ರಣವನ್ನು ಕಡೆಗಣಿಸಿದ್ದಾರೆ. ಇವರ ನಿರ್ಲಕ್ಷ್ಯಕ್ಕೆ ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಮಧ್ಯೆ ಝೀಕಾ ವೈರಸ್ ಕೂಡ ಸಂಕಷ್ಟ ತಂದೊಡ್ಡುತ್ತಿದೆ. ಇದರ ಕುರಿತು ಮುಂದಿನ ಅಧಿವೇಶನದಲ್ಲಿ ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದರು.
ಡೆಂಗ್ಯೂ ಕಾರಣಕ್ಕೆ ಚಿಕ್ಕ ಹುಡುಗ ಮೃತಪಟ್ಟಿದ್ದಾನೆ. ಆರೋಗ್ಯ ಇಲಾಖೆ ನಿದ್ರೆಗೆ ಜಾರಿದೆ. ಸರ್ಕಾರದಲ್ಲೂ ಯಾವುದೇ ಕೆಲಸ ಆಗುತ್ತಿಲ್ಲ. ಕಾಮಗಾರಿಗಳೂ ಅರ್ಧಕ್ಕೆ ನಿಂತಿದೆ. ಹೀಗಾಗಿ ನಿಂತ ನೀರಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಜಲಮಂಡಳಿ ಸರಿಯಾದ ಕೆಲಸ ಮಾಡುತ್ತಿಲ್ಲ.
ತುಂಬಾ ಕಡೆ ನೀರು ಸೋರಿಕೆಯಾಗಿ ಸೊಳ್ಳೆಗಳು ಉತ್ಪತ್ತಿಗೆ ದಾರಿ ಸುಗಮವಾಗಿದೆ. ಇದ್ಯಾವುದನ್ನೂ ಗಮನಿಸುವ ಕೆಲಸ ಆಗುತ್ತಿಲ್ಲ ಎಂದು ಟೀಕಿಸಿದರು.ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಬಹಳಷ್ಟು ಜನರು ದಾಖಲಾಗುತ್ತಿದ್ದು, ಸರಿಯಾಗಿ ಔಷಧಿ ಸಿಗುತ್ತಿಲ್ಲ. ಔಷಧಿಯ ಬಿಲ್ ಹೆಚ್ಚಿಸಿದ್ದಾರೆ. ಡೆಂಗ್ಯೂ ಪರೀಕ್ಷೆಗೆ ಸರಕಾರ ನಿಗದಿಪಡಿಸಿದ ಮೊತ್ತವನ್ನು ಯಾರೂ ಪಾಲಿಸುತ್ತಿಲ್ಲ ಎಂದು ಅವರು ಆಕ್ಷೇಪಿಸಿದರು.