ಬೆಂಗಳೂರು : ವಿದೇಶದಲ್ಲಿ ನೆಲೆಸಿದ್ದರು ಕೂಡ ಬೆಂಗಳೂರಿನ ಸ್ಥಳೀಯರನ್ನು ಬಳಸಿಕೊಂಡು ಡ್ರಗ್ಸ್, ಮಾದಕವಸ್ತುಗಳನ್ನ ಮಾರಾಟ ದಂಧೆ ನಡೆಸುತ್ತಿರುವ ಆರೋಪದಡಿ ತಾಯಿ, ಮಗಳು ಸೇರಿ ಮೂವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೌದು ಜಕ್ಕೂರಿನ ಎಂಬೆಸ್ಸಿ ಬುಲೆವಾರ್ಡ್ ನಿವಾಸಿ ಆಯಾಜ್ ಮೆಹಮೂದ್ ಎಂಬುವವರು ನೀಡಿದ ದೂರಿನ ಮೇರೆಗೆ ದುಬೈ ನಿವಾಸಿಗಳಾದ ನತಾಲಿಯಾ ನಿರ್ವಾನಿ, ಅವರ ತಾಯಿ ಲೀನಾ ನಿರ್ವಾನಿ ಹಾಗೂ ರಂಜನ್ ಎಂಬುವವರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಆಯಾಜ್ ಮೆಹಮೂದ್ ನೀಡಿದ ದೂರಿನಲ್ಲಿ ‘ ನತಾಲಿಯಾ ನಿರ್ವಾನಿ ಅವರು ತಮ್ಮ ತಾಯಿ ಲೀನಾ ನಿರ್ವಾನಿ ಜತೆಗೆ ದುಬೈನಲ್ಲಿ ನೆಲೆಸಿದ್ದಾರೆ. ನತಾಲಿಯಾ ನಗರದ ಸ್ಥಳೀಯ ರಂಜನ್ ಎಂಬಾತನ ಮುಖಾಂತರ ಸ್ಥಳೀಯರಿಂದ ಹಣ ಪಡೆದು ಹೈಡೋ ಗಾಂಜಾ ಮತ್ತು ಎಂಡಿಎಂಎ ಸೇರಿ ಇತರೆ ಮಾದಕಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆ.
ನತಾಲಿಯಾ ದುಬೈ-ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಾ ಮಾದಕವಸ್ತು ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.