ರಾಮನಗರ : ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯ ಸಿಪಿ ಯೋಗೇಶ್ವರ್ ಅಭ್ಯರ್ಥಿ ಆಗಲಿದ್ದಾರೆ ಎಂದು ಇದೀಗ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಒಂದು ವೇಳೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸಿದರೂ ಅವರಿಗೆ ಬೆಂಬಲ ನೀಡುವ ಬಗ್ಗೆ ಜೆಡಿಎಸ್ ಪಾಳೆಯದಲ್ಲಿ ಒಲವು ವ್ಯಕ್ತವಾಗಿದೆ.
ಹೌದು ಎಚ್.ಡಿ.ಕುಮಾರಸ್ವಾಮಿ ಸಹ ಉಪಚುನಾವಣೆ ಘೋಷಣೆಯಾದ ಬಳಿಕ ಅಭ್ಯರ್ಥಿ ಆಯ್ಕೆ ಎಂದು ಹೇಳಿದರೂ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ಸಿ.ಪಿ.ಯೋಗೇಶ್ವರ್ ನಾಯಕರಲ್ಲಿ ಅವರೇ ಅಭ್ಯರ್ಥಿ ಎಂಬ ನಿಲುವು ಬಿತ್ತಿದ್ದಾರೆ. ಅವರನ್ನು ಗೆಲ್ಲಿಸುವಲ್ಲಿ ಅವಿರತವಾಗಿ ಶ್ರಮಿಸಲು ಉಭಯಪಕ್ಷಗಳಕಾರ್ಯಕರ್ತರು ಸಹ ಮುಂದಾಗಿದ್ದಾರೆ. ಆದರೂ ಬಿಜೆಪಿ-ಜೆಡಿಎಸ್‌ನ ಹೈಕಮಾಂಡ್ ತೀರ್ಮಾನವೇ ಅಂತಿಮವಾ ಗಿರುವುದರಿಂದ ಯಾರಿಗೆ ಟಿಕೆಟ್ ಲಭಿಸಲಿದೆ ಎಂಬುದು ತೀವ್ರ ಕೂತುಹಲ ಮೂಡಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸುವಲ್ಲಿ ಮತ್ತು ಗೆಲ್ಲಿಸುವಲ್ಲಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಗೆಲುವಿಗೆ ಯೋಗೇಶ್ವರ್ ಶ್ರಮ ಸಾಕಷ್ಟು ಇದೆ. ಈ ಋಣ ತೀರಿಸಲು ಯೋಗೇಶ್ವರ್ ಅವರನ್ನು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಬೇಕು ಎಂಬ ಅಭಿಪ್ರಾಯ ಜೆಡಿಎಸ್ ಮುಖಂಡರಿಂದಲೇ ವ್ಯಕ್ತವಾಗುತ್ತಿದೆ ಎಂದು ತಿಳಿದುಬಂದಿದೆ.
ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ಗೆ ತಿರುಗೇಟು ನೀಡಲು ತಂತ್ರಗಾರಿಕೆ ರೂಪಿಸುವಲ್ಲಿ ಯೋಗೇಶ್ವರ್ ಪಾತ್ರ ಸಹ ಇದೆ. ಉಭಯ ಪಕ್ಷಗಳ ಸ್ಥಳೀಯ ನಾಯಕರಿಗೂ ಯೋಗೇಶ್ವರ್ ಪಾತ್ರದ ಬಗ್ಗೆ ತಿಳಿದಿದೆ. ಹೀಗಾಗಿ ಅವರಿಗೆ ಬೆಂಬಲ ನೀಡಲು ಎರಡೂ ಪಕ್ಷಗಳ ನಾಯಕರು ಒಲವು ಹೊಂದಿದ್ದಾರೆ.