ಹಾಸನ : ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲುವಾಸ ಅನುಭವಿಸುತ್ತಿರುವ ಎಂಎಲ್ಸಿ ಸೂರಜ್ ರೆಮಣೆಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮ ದೌರ್ಜನ್ಯಕ್ಕೆ ಸಂಬಂಧಿಸಿ ದಂತೆ ಈಗ 2ನೇ ದೂರು ದಾಖಲಾಗಿದೆ. ಅವರ ಆಪ್ತನೇ ತನ್ನ ಮೇಲೆ ಮೂರು ವರ್ಷದಿಂದ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.
ಸಲಿಂಗಕಾಮ ಪ್ರಕರಣದಲ್ಲಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಎಂಎಲ್‌ಸಿ ಡಾ.ಸೂರಜ್ ರೇವಣ್ಣ ಪರವಾಗಿ ಜೂ.21 ರಂದು ದೂರು ನೀಡಿದ್ದ ಸೂರಜ್ ಆಪ್ತ ಶಿವಕುಮಾರ್ ಈಗ ಉಲ್ಟಾ ಹೊಡೆದಿದ್ದಾರೆ. ಸೂರಜ್‌ರಿಂದ ತನ್ನ ಮೇಲೂ 3 ವರ್ಷಗಳ ಹಿಂದೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ದೂರುದಾರನ ವಿರುದ್ಧ ದೂರು ನೀಡಲು ನನಗೆ ಒತ್ತಡ ವಿತ್ತು. ಸೂರಜ್ ಒತ್ತಡಕ್ಕೆ ಮಣಿದು ಅಂದು ದೂರು ನೀಡಿದ್ದೆ. ನನಗೆ ಬೆದರಿಕೆ ಹಾಕಿ ದೂರು ಕೊಡಿಸಿದ್ದರು. 3 ವರ್ಷಗಳ ಹಿಂದೆ ಗನ್ನಿಕಡ ತೋಟದ ಮನೆಯಲ್ಲಿ ಸೂರಜ್ ನನ್ನ ಮೇಲೂ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಶಿವಕುಮಾರ್ ದೂರಿನಲ್ಲಿ ಹೇಳಿದ್ದಾರೆ.
ಜೂ.21ರಂದು ಸೂರಜ್ ಪರ, ಅರಕಲಗೂಡು ಯುವಕನ ವಿರುದ್ಧ ದೂರು ದಾಖಲಿಸಿದ್ದ ಹನುಮನಹಳ್ಳಿಯ ಶಿವಕುಮಾರ್, ದೂರುದಾರ ನನ್ನ ಮೂಲಕ ನಮ್ಮ ನಾಯಕ ಎಂಎಲ್‌ಸಿ ಡಾ.ಸೂರಜ್ ರಿಗೆ 5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದರೆ ಸೂರಜ್ ವಿರುದ್ಧ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದರು. ನಿನ್ನೆ ಹೊಳೆನರಸೀಪುರ ನಗರ ಠಾಣೆಗೆ ಆಗಮಿಸಿದ ಶಿವಕುಮಾರ್ ಸೂರಜ್ ವಿರುದ್ದವೇ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.