ಬೆಳಗಾವಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಭ್ರೂಣ ಹತ್ಯೆ ಮಾಡಿ ನಂತರ ಭ್ರೂಣಗಳನ್ನು ತೋಟದಲ್ಲಿ ಹೂತು ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಮಕ್ಕಳ ಮಾರಾಟ ಜಾಲ ಪತ್ತೆ ಪ್ರಕರಣದಲ್ಲಿ ಈಗಾಗಲೇ ಪೊಲೀಸರು ವೈದ್ಯ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಬಂಧಿತ ವೈದ್ಯ ಕಿಂಗ್ಪಿನ್ ಅಬ್ದುಲ್ ಗಫರ್ ಲಾಡಖಾನ್ ವೈದ್ಯನೇ ಅಲ್ಲ. ಯಾವುದೇ ಅನುಮತಿ ಪಡೆಯದೆ ಕಳೆದ 10 ವರ್ಷಗಳಿಂದ ಕಿತ್ತೂರು ಪಟ್ಟಣದಲ್ಲಿ ಆರ್ಎಂಪಿ ವೈದ್ಯ ಎಂದು ಹೇಳಿಕೊಂಡು ಕ್ಲಿನಿಕ್ ನಡೆಸುತ್ತಿದ್ದ. ಈತನ ಬಗ್ಗೆ ಹಲವು ಬಾರಿ ಸ್ಥಳೀಯರು ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಇನ್ನು ಮಕ್ಕಳ ಮಾರಾಟ ಅಷ್ಟೇ ಅಲ್ಲದೇ ಭ್ರೂಣಹತ್ಯೆ ಕೂಡ ಮಾಡಿದ್ದಾಗಿ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಪೊಲೀಸರು ನಕಲಿ ವೈದ್ಯನ ತೋಟದ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಭ್ರೂಣಗಳನ್ನು ತೋಟದಲ್ಲಿ ಹೂತು ಹಾಕಿದ್ದ ಹಿನೆಲೆಯಲ್ಲಿ ನಕಲಿ ವೈದ್ಯನ ತಿಗಡೊಳ್ಳಿಯ ತೋಟದಲ್ಲಿ ಡಿಹೆಚ್ ಮಹೇಶ್ ಕೋಣಿ, ಎಸಿ. ಪ್ರಭಾವತಿ ಫಕೀರಪುರ, ಬೈಲಹೊಂಗಲ ಡಿವೈಎಸ್ ಪಿ ರವಿ ನಾಯಕ್ ಮೂವರು ಸಿಪಿಐ ನೇತೃತ್ದಲ್ಲಿ ಶೋಧ, ಭ್ರೂಣಗಳನ್ನು ತೋಟದಲ್ಲಿ ಹೂತು ಹಾಕಿದ್ದ ವೈದ್ಯನ ಸಹಾಯಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.