ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅವರನ್ನು ಕರ್ನಾಟಕ ರಾಜ್ಯ ಅರಣ್ಯ ವನ್ಯಜೀವಿ ರಾಯಭಾರಿ ಹುದ್ದೆಯಿಂದ ವಜಾ ಮಾಡಲಾಗಿದೆ. ಇನ್ನೂ ಈ ವಿಚಾರವಾಗಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿದ್ದು, ನಮ್ಮ ಇಲಾಖೆಯಲ್ಲಿ ಯಾರು ರಾಯಭಾರಿಗಳಿಲ್ಲ ಎಂದು ತಿಳಿಸಿದರು.
ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ ಬಳಿಕ ನಮ್ಮ ರಾಜ್ಯದ ಆನೆಗಳನ್ನು ಆಂಧ್ರಪ್ರದೇಶಕ್ಕೆ ಕಳುಹಿಸಿಕೊಡುವ ವಿಚಾರವಾಗಿ ಮಾತನಾಡಿದ ಅವರು, ಆಂಧ್ರಪ್ರದೇಶದವರು ನಮ್ಮ ರಾಜ್ಯದ ಆನೆಗಳನ್ನು ಕೇಳಿದ್ದಾರೆ ಅಷ್ಟೇ. ಆದರೆ ಯಾವುದೇ ಕಾರಣಕ್ಕೂ ದಸರಾ ಆನೆಗಳನ್ನು ಕಳುಹಿಸಿಕೊಡಲು ಆಗಲ್ಲ.ದಸರಾ ಆನೆಗಳು ನಮ್ಮ ಅಸ್ಮಿತೆ. ಇತರೆ ಆನೆಗಳನ್ನು ಕಳುಹಿಸಿಕೊಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನೂ ರಾಜ್ಯದಲ್ಲಿ ಇತ್ತೀಚಿಗೆ ವಿದ್ಯುತ್ ಸ್ಪರ್ಶಸಿ ಆನೆಗಳ ದುರಂತ ಸಾವು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾಯುತ್ತಿರುವುದು ದುಃಖದ ಸಂಗತಿ. ಆನೆಗಳ ಸಾವಿನ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.