ಮೈಸೂರು : ನೀಟ್ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಿರುವುದು ಸರಿಯಲ್ಲ, ನೀಟ್ ಮರು ಪರೀಕ್ಷೆ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀಟ್ ಪರೀಕ್ಷೆ ಬರೆದವರಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಿರುವುದು ಸರಿಯಲ್ಲ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಇದರಿಂದ ಮೋಸವಾಗಲಿದೆ. ಹೀಗಾಗಿ ನೀಟ್ ಮರುಪರೀಕ್ಷೆ ನಡೆಸಬೇಕು. ನೀಟ್ ಅಕ್ರಮದ ಬಗ್ಗೆ ತನಿಖೆ ನಡೆಸುವಂತೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.
ಇನ್ನು ದರ್ಶನ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ದರ್ಶನ್ ಮೇಲಿನ ಕೊಲೆ ಆರೋಪ ಪ್ರಕರಣದಲ್ಲಿ ಯಾವ ಪ್ರಭಾವಿಗಳೂ ನನ್ನನ್ನು ಭೇಟಿಯಾಗಲು ಬಂದಿಲ್ಲ. ಬಿಜೆಪಿಯವರು ಬೇಕೆಂದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾವು ಈ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ. ಕಾನೂನು ರೀತಿ ಹೇಗೆ ತನಿಖೆಯಾಗಬೇಕು ಹಾಗೆಯೇ ಆಗುತ್ತದೆ, ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.