ಮೈಸೂರು : ರಾಜ್ಯದಲ್ಲಿ ಐದು ಗ್ಯಾರಂಟಿಗಳೂ ಕೂಡ ಮುಂದುವರೆಯಲಿವೆ, ಈ ಬಗ್ಗೆ ಯಾವುದೇ ಅನುಮಾನಗಳು ಬೇಡ. ಅವು ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಲೋಕಸಭೆಯಲ್ಲಿ ಒಂದು ಸ್ಥಾನದಿಂದ 9 ಸ್ಥಾನಗಳನ್ನು ಪಡೆದಿದ್ದೇವೆ. ನಮ್ಮ ನಿರೀಕ್ಷೆಯಷ್ಟು ಫಲಿತಾಂಶ ಬಂದಿಲ್ಲ. ಒಂದರಿಂದ 9 ಸ್ಥಾನಕ್ಕೇರಿದ್ದು, ಕಳೆದ ಬಾರಿಗಿಂತ 13% ಹೆಚ್ಚು ಮತಗಳ ಹಂಚಿಕೆ ನಮ್ಮ ಪರವಾಗಿದೆ. ಹಾಗೆಂದು ನಮ್ಮ ಬೆನ್ನು ತಟ್ಟಿಕೊಳ್ಳುತ್ತಿಲ್ಲ. ನಮ್ಮ ಫಲಿತಾಂಶ ಕಳೆದ ಬಾರಿಗಿಂತ ಉತ್ತಮವಾಗಿದೆ ಆದರೆ ನಿರೀಕ್ಷೆಯಂತೆ ಆಗಿಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಫೋಕ್ಸೋ ಪ್ರಕರಣದಲ್ಲಿ ದೂರು ನೀಡಿರುವವರು ಯಾರು? ಸರ್ಕಾರ ಅಲ್ಲ, ಖಾಸಗಿ ವ್ಯಕ್ತಿ ದೂರು ನೀಡಿದ್ದು ಹೌದಲ್ವಾ? ಹೀಗಿರುವಾಗ ದ್ವೇಷದ ರಾಜಕಾರಣ ಎಲ್ಲಿದೆ? ಕಾನೂನು ರೀತಿ ಕೆಲಸ ಮಾಡುವ ಪೋಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಒಪ್ಪಿ ಅದರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.