ಬೆಂಗಳೂರು : ನಾವು ಯಾರ ಮೇಲೂ ದ್ವೇಷದ ರಾಜಕೀಯ ಮಾಡಲ್ಲ. ಆ ರೀತಿಯ ರಾಜಕೀಯ ಮಾಡಿದ್ದರೆ ಮೊದಲ ದಿನವೇ ಮಾಡುತ್ತಿದ್ವಿ. ನಮಗೆ ಅದರ ಅವಶ್ಯಕತೆ ಇಲ್ಲ. ನಾವು ಯಾವುದಕ್ಕೂ ಮಧ್ಯೆ ಹೋಗಲ್ಲ. ದ್ವೇಷ ರಾಜಕಾರಣ ಮಾಡುವುದಾದರೆ ಪ್ರಕರಣ ದಾಖಲಾದ ತಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದೆವು. ಪಾಪ ಅವರು ಮಾತನಾಡಬೇಕು ಮಾತನಾಡ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿ ಬಳಿ ಮಾತನಾಡಿದ ಅವರು, ನೋಡಿ ನಾವ್ಯಾಕೆ ದ್ವೇಷದ ರಾಜಕೀಯ ಮಾಡಬೇಕು?. ನಮಗೆ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಯಾರ ಮೇಲೆ ದ್ವೇಷ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯವರು ನಮ್ಮ ಮೇಲೆ ಕೇಸು ಹಾಕಿಸಿ ಕೋರ್ಟಿಗೆ ಹೋಗುವಂತೆ ಮಾಡಿದ್ದು ದ್ವೇಷ ರಾಜಕಾರಣ ಅಲ್ಲವೇ? ರಾಹುಲ್ ಗಾಂಧಿ ಅವರಿಗೆ ಅವರದ್ದೇ ಆದ ತೊಂದರೆಗಳಿವೆ. ಯಡಿಯೂರಪ್ಪ ಅವರ ಪ್ರಕರಣದಲ್ಲಿ ಮೂಗು ತೂರಿಸುವ ಅಗತ್ಯ ಅವರಿಗಿಲ್ಲ. ಕಾಂಗ್ರೆಸ್‌ನವರು ದ್ವೇಷ ಸಾಧಿಸಲು ನೀಚ ರಾಜಕಾರಣ ಮಾಡುವುದಿಲ್ಲ ಎಂದರು.
ದ್ವೇಷ ರಾಜಕಾರಣದ ಬಗ್ಗೆ ನಾನು ಮಾತನಾಡಲು ಆರಂಭಿಸಿದರೆ ಅದು ಎಲ್ಲೆಲ್ಲಿಗೋ ಹೋಗುತ್ತದೆ. ನನಗೆ ಅದರ ನೋವು ಗೊತ್ತು. ನಾನು ಅನುಭವಿಸಿದ್ದೇನೆ. ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ಹಿಂದಿನ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜಾಹೀರಾತು ನೀಡಿದ್ದ ಬಗ್ಗೆ ನಮ್ಮ ಮೇಲೆ ಕೇಸು ದಾಖಲಿಸಿದೆ, ಅದನ್ನು ಎದುರಿಸುತ್ತೇವೆ. ಆದರೆ ರಾಹುಲ್‌ಗಾಂಧಿ ಅವರನ್ನು ಮಧ್ಯೆ ತರಲು ಅವರೇನು ಕೆಪಿಸಿಸಿ ಅಥವಾ ಎಐಸಿಸಿ ಅಧ್ಯಕ್ಷರಾಗಿದ್ದರೇ? ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕಾಮನ್‌ಸೆನ್ಸ್ ಇರಲಿಲ್ಲವೇ? ಅವರ ಪಕ್ಷದ ಎಂಎಲ್‌ಸಿ ಮೂಲಕ ಕೇಸು ಹಾಕಿಸಿದ್ದೇಕೆ ಎಂದು ಪ್ರಶ್ನಿಸಿದರು.