ಬೆಂಗಳೂರು : ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರಿನ ಸೇವನೆ ಮತ್ತು ಸೇವಿಸಿರುವ ಆಹಾರದಿಂದಾಗಿ ಒಟ್ಟು 98 ಜನರು ಅಸ್ವಸ್ತರಾಗಿದ್ದು, ಅದರಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ 39 ಜನರು ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಉಳಿದವರು ಸ್ಥಳದಲ್ಲಿಯೇ ಚಿಕಿತ್ಸೆ ಪಡೆದು, ಗುಣೋನ್ಮುಖರಾಗಿ ಮನೆಗಳಿಗೆ ತೆರಳಿರುತ್ತಾರೆ.
ವಿದೇಶ ಪ್ರವಾಸದಲ್ಲಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಚಿನ್ನೇನಹಳ್ಳಿ ಗ್ರಾಮದ ಸಾರ್ವಜನಿಕರ ಆರೋಗ್ಯದ ಬಗ್ಗೆ ತೀವ್ರ ನಿಗಾ ಇರಿಸಲು ಹಾಗು ಪರ್ಯಾಯ ಶುದ್ಧ ನೀರಿನ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ.
ಸಚಿವರ ಸೂಚನೆಯ ಮೇರೆಗೆ ಚಿನ್ನೇನಹಳ್ಳಿ ಗ್ರಾಮದ ಶಾಲೆಯಲ್ಲಿಯೇ 6 ಹಾಸಿಗೆಗಳ ತುರ್ತು ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಎಲ್ಲಾ ಚಿಕಿತ್ಸೆಗಳನ್ನು ನೀಡಲು ವೈದ್ಯಕೀಯ ಸಿಬ್ಬಂದಿಗಳು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿರುತ್ತಾರೆ.
ಚಿನ್ನೇನಹಳ್ಳಿ ಗ್ರಾಮದಲ್ಲಿ ಇರುವ ಕೊಳವೆ ಬಾವಿಗಳು ಮತ್ತು ನೀರಿನ ಜಲಸಂಗ್ರಹಗಳಿಂದ ಸರಬರಾಜು ಮಾಡುತ್ತಿದ್ದ ನೀರನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಪ್ರಸ್ತುತ 2 ಟ್ಯಾಂಕರ್ಗಳ ಮೂಲಕ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿರುವ ಎಲ್ಲಾ ನೀರಿನ ಮೂಲಗಳ ಮಾದರಿಗಳನ್ನು ಸಂಗ್ರಹಿಸಿ, ಪ್ರಾಥಮಿಕ ಹಂತದಲ್ಲಿ ಪರೀಕ್ಷಿಸಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿರುತ್ತದೆ.
ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿರುವ ಪ್ರಕರಣವು ವಿಷಾದನೀಯವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಧುಗಿರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರನ್ನು ಅಮಾನತ್ತುಗೊಳಿಸಲಾಗಿದೆ, ಅಲ್ಲದೆ, ಚಿನ್ನೇನಹಳ್ಳಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಹಾಗೂ ನೀರು ಸರಬರಾಜು ಸಿಬ್ಬಂದಿಯನ್ನು ಶಿಸ್ತು ಕ್ರಮ ಕಾಯ್ದಿರಿಸಿ, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಲುಷಿತ ನೀರಿನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಮತ್ತು ನೀರಿನ ಸರಬರಾಜು ವ್ಯವಸ್ಥೆಯನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸುವಂತೆ ಮತ್ತು ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ದಿನಾಂಕ 27-05-2024ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖಾ ವ್ಯಾಪ್ತಿಯ ಎಲ್ಲಾ ವಿಭಾಗಗಳ ಕಾರ್ಯಪಾಲಕ ಅಭಿಯಂತರರುಗಳಿಗೆ ಪತ್ರದ ಮೂಲಕ ಸೂಚನೆ ನೀಡಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
‘ನೀಟ್-ಯುಜಿ ಪರೀಕ್ಷೆ’ ಅಕ್ರಮ: ‘ಗ್ರೇಸ್ ಅಂಕ’ಗಳನ್ನು ಹಿಂತೆಗೆದುಕೊಂಡ ‘NTA’ | NEET-UG 2024 results
BREAKING: ‘NSA’ಯಾಗಿ ಅಜಿತ್ ದೋವಲ್, ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕೆ.ಮಿಶ್ರಾ ಮರು ನೇಮಕ