ದಕ್ಷಿಣಕನ್ನಡ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಆರೋಪಿ ಶಶಿರಾಜ್ ಶೆಟ್ಟಿಗೆ 25 ದಿನಗಳ ಬಳಿಕ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.ಅದರೊಂದಿಗೆ ನಾಪತ್ತೆಯಾಗಿದ್ದ ಮತ್ತೊಬ್ಬ ಆರೋಪಿ ಪ್ರಮೋದ್ ದಿಡುಪೆಗೂ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಮೇ18 ರಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಂ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಇತ್ತೀಚಿಗೆ ಈ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ PSI ಗೆ ಧಮ್ಕಿ ಹಾಕಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಅವರ ಬಂಧನಕ್ಕೂ ಕೂಡ ಪೊಲೀಸರು ಅವರ ನಿವಾಸಕ್ಕೆ ತೆರಳಿದ್ದರು.
ಬಳಿಕ ಪ್ರಕರಣದ ಆರೋಪಿಯಾದ ಶಶಿರಾಜ್ ಶೆಟ್ಟಿಯನ್ನು ಮೇ18 ರಂದು ರಾತ್ರಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಬಂಧಿಸಿದ 25 ದಿನಗಳ ಬಳಿಕ ಶಶಿರಾಜ್ ಶೆಟ್ಟಿಗೆ ಮಂಗಳೂರು ಸೆಷನ್ಸ್ ಕೋರ್ಟ್ ನಿಂದ ಇಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಮಾಡಿದ್ದಾರೆ. ಶಶಿರಾಜ್ ಶೆಟ್ಟಿ ಪರ ನ್ಯಾಯವಾದಿ ಮಹೇಶ್ ಕಜೆ ಕೋರ್ಟ್ ನಲ್ಲಿ ವಾದಿಸಿದರು.