ಬೆಂಗಳೂರು : ನಟ ದರ್ಶನ್ ಹಾಗೂ ಗ್ಯಾಂಗ್ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈ ಒಂದು ಪ್ರಕರಣಕ್ಕೆ ಗೃಹ ಇಲಾಖೆಯ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ನಾನಾಗಲಿ, ದರ್ಶನ್ ಅಗಲಿ ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮ ಆಗುತ್ತದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಕ್ರಮ ಆಗುತ್ತದೆ. ನಾನಾಗಲಿ ದರ್ಶನಾಗಲಿ ಕಾನೂನು ಎಲ್ಲರಿಗೂ ಒಂದೇ. ರೇಣುಕಾ ಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಹೇಳಲಾಗುತ್ತಿದ್ದು ಅದಕ್ಕೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಅವರನ್ನು ಕರೆದುಕೊಂಡು ಬಂದು ಹೊಡೆದು ಸಾಯಿಸಿದ್ದಾರೆ ಅದು ತಪ್ಪು.
ಈಗಾಗಲೇ ಆತನ ಪ್ರಾಣ ಹೋಗಿದೆ ಯಾರು ಏನು ಮಾಡೋಕೆ ಆಗುವುದಿಲ್ಲ. ಆದರೆ ಕಾನೂನು ಪ್ರಕಾರ ಏನು ತೆಗೆದುಕೊಳ್ಳಬೇಕು ಪೋಲಿಸ್ ಇಲಾಖೆ ತೆಗೆದುಕೊಳ್ಳುತ್ತದೆ. ನನಗೆ ಗೊತ್ತಿದ್ದಂಗೆ ಯಾರು ದರ್ಶನ್ ನನ್ನು ರಕ್ಷಿಸಲು ಪ್ರಯತ್ನ ಮಾಡಿಲ್ಲ. ಕಾನೂನಲ್ಲಿ ಏನು ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ ಅದನ್ನು ಪೊಲೀಸರು ತೆಗೆದುಕೊಳ್ಳುತ್ತಾರೆ. ಸರ್ಕಾರದಿಂದ ಯಾರು ಈ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ.