ಬೆಂಗಳೂರು: ಕರ್ತವ್ಯದ ಅವಧಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಮೊಬೈಲ್ ಬಳಸುವಂತಿಲ್ಲ. ಆಸ್ಪತ್ರೆಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿ ರಾಜ್ಯ ಸರ್ಕಾರ ಖಡಕ್ ಆದೇಶ ಹೊರಡಿಸಿದೆ.
ಈ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ದೂರೊಂದನ್ನು ನೀಡಲಾಗಿತ್ತು. ಆ ದೂರಿನ ಅನ್ವಯ ಆರೋಗ್ಯ ಇಲಾಖೆಯಿಂದ ಆಸ್ಪತ್ರೆಗಳಲ್ಲಿ ಕರ್ತವ್ಯದ ಅವಧಿಯಲ್ಲಿ ಅಧಿಕಾರಿ, ಸಿಬ್ಬಂದಿ ಮೊಬೈಲ್ ಬಳಸುವಂತಿಲ್ಲ ಅಂತ ಆದೇಶ ಮಾಡಿದೆ.
ಕೆಲ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತ ವೈದ್ಯರು, ಶುಶ್ರೂಷಕರು, ಗ್ರೂಪ್-ಡಿ ಸಿಬ್ಬಂದಿಗಳು ರೋಗಿಗಳನ್ನು ಉಪಚಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಚಿಕಿತ್ಸೆ ನೀಡದೇ ಮೊಬೈಲ್ ನೋಡುತ್ತಿರುವುದು ಆರೋಗ್ಯ ಸಚಿವರ ಗಮನಕ್ಕೆ ಬಂದಿದೆ ಎಂದು ಹೇಳಿದೆ.
ಈ ಹಿನ್ನಲೆಯಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ತಿಳಿಯಪಡಿಸುವುದೇನೆಂದರೇ, ಆಸ್ಪತ್ರೆಯ ಕರ್ತವ್ಯದ ಅವಧಿಯಲ್ಲಿ ಕರೆಗಳನ್ನು ಸ್ವೀಕರಿಸಲು ಮತ್ತು ಮಾಡುವಾಗ ಮಾತ್ರವೇ ಮೊಬೈಲ್ ಬಳಸುವುದು. ಇದರ ಹೊರತಾಗಿ ಇನ್ನಿತರೆ ಅಂದರೆ ಸಾಮಾಜಿಕ ಚಾಲತಾಣಕ್ಕಾಗಿ ಮೊಬೈಲ್ ಬಳಸಿವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಎಂದಿದೆ.
ಒಂದು ವೇಳೆ ಕರ್ತವ್ಯದ ಅವಧಿಯಲ್ಲಿ ಮೊಬೈಲ್ ಬಳಸುವುದು ಕಂಡು ಬಂದಲ್ಲಿ ಹಾಗೂ ಸಾರ್ವಜನಿಕರಿಂದ ಆಕ್ಷೇಪಣೆಗಳು ಸ್ವೀಕೃತವಾದಲ್ಲಿ, ಅಂತಹ ಅಧಿಕಾರಿ, ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಎಚ್ಚರಿಸಿದೆ.
BIG UPDATE : ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಒಟ್ಟು 13 ಜನರ ಬಂಧನ