ಬೆಂಗಳೂರು : ಉತ್ತರಾಖಂಡದ ಶಾಸ್ತ್ರತಾಳ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಚಾರಣಕ್ಕೆ ತೆರಳಿದ್ದ ರಾಜ್ಯದ ಐವರು ಚಾರಣಿಗರು ಸಾವನ್ನಪ್ಪಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಉತ್ತರಾಖಂಡದ ಶಾಸ್ತ್ರತಾಳ್ ನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಚಾರಣಕ್ಕೆ ತೆರಳಿದ್ದ ರಾಜ್ಯದ ಐವರು ಚಾರಣಿಗರು ಮೃತಪಟ್ಟ ಸುದ್ದಿ ತಿಳಿದು ನೋವಾಯಿತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಈಗಾಗಲೇ ರಕ್ಷಣಾ ಕಾರ್ಯಾಚರಣೆಯ ಮೂಲಕ 11 ಜನರನ್ನು ಸುರಕ್ಷಿತ ಪ್ರದೇಶಕ್ಕೆ ವಾಪಸು ಕರೆತರಲಾಗಿದ್ದು, ಇನ್ನೂ ಕೆಲವು ಚಾರಣಿಗರ ರಕ್ಷಣೆ ಆಗಬೇಕಿದೆ. ಪ್ರತಿಕೂಲ ಹವಾಮಾನವು ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟುಮಾಡುತ್ತಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ನಮ್ಮ ಸರ್ಕಾರವು ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಸಚಿವರಾದ ಕೃಷ್ಣಬೈರೇಗೌಡ ಅವರಿಗೆ ಇಂದೇ ಡೆಹ್ರಾಡೂನ್‌ಗೆ ತೆರಳಿ ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸುವಂತೆ ಸೂಚಿಸಿದ್ದೇನೆ. ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳು ಹಾಗೂ ಸೇನಾ ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಿಕೊಂಡು ಅಪಾಯದಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಗೂಡು ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.