ಹುಬ್ಬಳ್ಳಿ : ಈ ಬರಿಯಾ ಲೋಕಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಆನಂದ್ ಅಸೂಟಿ ಎದುರು ಬಿಜೆಪಿಯ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಭರ್ಜರಿ ಗೆಲುವು ದಾಖಲಿಸಿದ್ದಾರೆ.ಈ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ.
ಗೆಲುವು ಕಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ನವರು ಕ್ಷೇತ್ರದಲ್ಲಿ ಹಣ ಹಂಡ ಹಂಚಿದರೂ ಕೂಡ ಕ್ಷೇತ್ರದ ಜನತೆ ನನ್ನ ಕೈ ಬಿಡಲಿಲ್ಲ.ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಪಪ್ರಚಾರದ ಪರಾಕಾಷ್ಠೆ ಮುಟ್ಟಿತ್ತು. ಅವರು ಪ್ರಚಾರ ಮಾಡುವುದನ್ನು ಬಿಟ್ಟು ಕೇವಲ ಅಪಪ್ರಚಾರದಲ್ಲೇ ತೊಡಗಿದ್ದರು. ದೇಶ ಮತ್ತು ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮಾಡುತ್ತಿರಲಿಲ್ಲ ಎಂದರು.
ನಿರೀಕ್ಷೆಗೆ ತಕ್ಕಂತೆ ಸೀಟು ಬಂದಿಲ್ಲ. ಎಲ್ಲಿ ಏನಾಗಿದೆ ಎಂಬ ವಾಸ್ತವವನ್ನು ನೋಡಬೇಕಾಗಿದೆ. ಆದಷ್ಟು ಶೀಘ್ರವೇ ದೆಹಲಿಗೆ ತೆರಳುತ್ತೇನೆ. ಈ ಬಗ್ಗೆ ವರಿಷ್ಠರ ಜೊತೆಗೆ ಚರ್ಚಿಸುತ್ತೇನೆ. ದೇಶದಲ್ಲಿ ಚುನಾವಣೆ ಆಗಿದ್ದು ಎನ್ಡಿಎ ಹಾಗೂ ‘ಇಂಡಿ’ ಮೈತ್ರಿ ಮಧ್ಯೆ. ಆದ್ದರಿಂದ ನಮ್ಮ ಜೊತೆಗೆ ನಿಂತವರು ಗಟ್ಟಿಯಾಗಿ ನಿಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನತಾ ಜನಾರ್ದನನ ಆಶೀರ್ವಾದದಿಂದ ಗೆಲುವು ಸಿಕ್ಕಿದೆ. ಮತದಾರ ಪ್ರಭುಗಳಿಗೆ ಈ ಗೆಲುವು ಸಲ್ಲಬೇಕು. ಎಲ್ಲ ಕಾರ್ಯಕರ್ತರು, ಮುಖಂಡರು ಸೇರಿ ಸಮರ್ಪಕವಾಗಿ ಕೆಲಸ ಮಾಡಿದ್ದಾರೆ. ರಾಜ್ಯದ ಜನತೆ ಬಿಜೆಪಿ ಕೈ ಹಿಡಿದಿದ್ದಾರೆ. ದೇಶದಲ್ಲಿ ನಮಗೆ ಸ್ಥಾನಗಳು ಕಡಿಮೆಯಾಗಿವೆ. ಆದರೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ನಮ್ಮ ಕ್ಷೇತ್ರದ ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.