ಬೆಂಗಳೂರು: ಸಿದ್ದರಾಮಯ್ಯನವರಿಗೆ ಘನತೆ, ಗೌರವ ಇದ್ದರೆ, ನೈತಿಕತೆ ಇದ್ದರೆ ಮೊದಲು ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಆಫ್ ಬರೋಡದಿಂದ 144 ಕೋಟಿ ರೂಪಾಯಿ ಓವರ್ ಡ್ರಾಫ್ಟ್ (ಸಾಲ) ಪಡೆದಿದ್ದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಗೆ ಇದನ್ನು ಪಡೆಯಲಾಯಿತೇ? ಆ ಕಂಪನಿಗಳಿಗೆ ಚುನಾವಣೆ ವೇಳೆ ಯಾಕೆ ಹಣ ಹಾಕಿದ್ದೀರಿ? ಆ ಕಂಪನಿಗಳ ಮಾಲೀಕರು ಯಾರು? ಆ ಕಂಪನಿಗಳು ಮತ್ತು ಡಿ.ಕೆ.ಶಿವಕುಮಾರರಿಗೆ, ನಾಗೇಂದ್ರರಿಗೆ, ಸಿದ್ದರಾಮಯ್ಯರಿಗೆ ಏನು ಸಂಬಂಧ ಎಂದು ಕೇಳಿದರು.
ಈ ಓವರ್ ಡ್ರಾಫ್ಟ್ ಪಡೆಯಲು ಕ್ಯಾಬಿನೆಟ್ ನಿರ್ಣಯ ಮಾಡಿಲ್ಲವೇಕೆ ಎಂದೂ ಪ್ರಶ್ನಿಸಿದರು. ಇದರೊಳಗೆ ನಾಗೇಂದ್ರ ಮಾತ್ರವಲ್ಲದೆ ಅನೇಕ ಅಧಿಕಾರಿಗಳಿದ್ದಾರೆ. ತೆಲಂಗಾಣದಲ್ಲಿ ಚುನಾವಣೆಗೆ ನಿಂತ ಅನೇಕ ಅಭ್ಯರ್ಥಿಗಳೂ ಇದರಲ್ಲಿದ್ದಾರೆ. ಹಣ ಕೊಟ್ಟ ಅನೇಕ ಮಂತ್ರಿಗಳೂ ಕರ್ನಾಟಕದಲ್ಲಿದ್ದಾರೆ. ಇದೊಂದು ಅಂತರರಾಜ್ಯ ಭ್ರಷ್ಟಾಚಾರ. ಆದ್ದರಿಂದ ಸಿಬಿಐ ತನಿಖೆ ನಡೆಸಬೇಕಿದೆ ಎಂದು ಪ್ರತಿಪಾದಿಸಿದರು.
ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ಇರುವ ವಾಲ್ಮೀಕಿ ಅಭಿವೃದ್ಧಿ ನಿಗಮವು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಬಳಿಕ ವ್ಯಾಪಾರ ಮಾಡುವ ನಿಗಮವಾಗಿ ಪರಿವರ್ತನೆಯಾಗಿದೆ ಎಂದು ಟೀಕಿಸಿದರು. ನಿಗಮವು ಐಟಿ ಕಂಪನಿಗೆ ಸಾಲ ಕೊಡುವ ಕೆಲಸ ಮಾಡುವುದಿಲ್ಲ. ಆದರೆ, ಈ ನಿಗಮವು 6+9 ಕಂಪನಿಗಳಿಗೆ ಹಣ ಕೊಟ್ಟಿದೆ. ಆ ಕಂಪನಿಗಳು ಯಾವುವು? ಅವರ ಟ್ರ್ಯಾಕ್ ರೆಕಾರ್ಡ್ ಏನು? ಅವರಿಗೆ ಯಾಕೆ ಹಣ ಕೊಟ್ಟಿದ್ದೀರಿ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಸಾಲ ಕೊಡಲು ಅನುಮತಿ ಕೊಟ್ಟವರು ಯಾರು? ಸಚಿವಸಂಪುಟದಲ್ಲಿ ನಿರ್ಧಾರ ಆಗಿತ್ತೇ? ಎಂದು ಮುಖ್ಯಮಂತ್ರಿ ಮತ್ತು ಸಚಿವ ನಾಗೇಂದ್ರರನ್ನು ಕೇಳಿದರು. ಸಿಎಂ, ಡಿಸಿಎಂಗೆ ಗೊತ್ತಿದ್ದೇ ಇದು ನಡೆದಿದೆ. ಅದನ್ನು ಮುಚ್ಚಿಡುತ್ತಿದ್ದಾರೆ ಎಂದರಲ್ಲದೆ, ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಇದು ಹೊರಕ್ಕೆ ಬಂದಿದೆ. ಈ ಸರಕಾರ ಒಬ್ಬ ಪ್ರಾಮಾಣಿಕ ಅಧಿಕಾರಿಯ ಬಲಿ ಪಡೆದಿದೆ ಎಂದು ಟೀಕಿಸಿದರು.
ಭಯೋತ್ಪಾದಕರು, ಉಗ್ರಗಾಮಿಗಳನ್ನು ಸಾಕಿ ಬೆಳೆಸುವ ಸರಕಾರ..
ಕಳ್ಳರು, ಖದೀಮರು, ಭಯೋತ್ಪಾದಕರನ್ನು, ಉಗ್ರಗಾಮಿಗಳನ್ನು ಸಾಕಿ ಬೆಳೆಸುವ ಸರಕಾರ ಇದು. ಪ್ರಾಮಾಣಿಕರು, ಪ್ರಾಮಾಣಿಕ ಅಧಿಕಾರಿ- ಸಿಬ್ಬಂದಿಗೆ ಸಹಾಯ ಮಾಡುವ ಸರಕಾರ ಇದಲ್ಲ; ಇದು ಗೂಂಡಾಗಳ, ಭಯೋತ್ಪಾದಕರ ಕೇಸು ರದ್ದು ಮಾಡುವ ಸರಕಾರ ಎಂದು ರವಿಕುಮಾರ್ ದೂರಿದರು. ಇದು ಕಳ್ಳ ಖದೀಮರ ಸರಕಾರ ಎಂದು ಅವರು ಆಕ್ಷೇಪಿಸಿದರು.
ಕಾಂಗ್ರೆಸ್ಸಿನ ಅನುಕೂಲಸಿಂಧು ನೀತಿ..
ಭಾರತದಲ್ಲಿ ನಡೆದ ಚುನಾವಣೆಗಳ ಬಗ್ಗೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ನಿನ್ನೆ ಪ್ರಕಟವಾಗಿದೆ. ಬಿಜೆಪಿ ನೇತೃತ್ವದ ಎನ್‍ಡಿಎಗೆ ಸ್ಪಷ್ಟ ಬಹುಮತ ಬರಲಿದ್ದು, 350 ಸೀಟು ದಾಟಿ 401 ಸೀಟುಗಳವರೆಗೆ ಎನ್‍ಡಿಎ ಪಡೆಯಬಹುದೆಂದು ತಿಳಿಸಿದ್ದಾಗಿ ವಿವರಿಸಿದರು.
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಜನರು ಮುಂದಾಗಿದ್ದಾರೆ. ಎಲ್ಲ ರಾಜ್ಯಗಳಲ್ಲಿ ಬಿಜೆಪಿ- ಎನ್‍ಡಿಎ ಗೆಲ್ಲುವ ಮುನ್ಸೂಚನೆ ಲಭಿಸಿದೆ. ಇದು ದೇಶದ 140 ಕೋಟಿ ಜನರಿಗೆ ಹೆಮ್ಮೆಯ ವಿಷಯ. ಆದರೆ, ಎಕ್ಸಿಟ್ ಪೋಲ್ ನಂಬುವುದಿಲ್ಲ ಎಂಬ ಅನುಕೂಲಸಿಂಧು ನೀತಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಟೀಕಿಸಿದರು.
ಹಿಂದೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ; ಬಿಜೆಪಿ ಸೋಲಲಿದೆ ಎಂದು ಎಕ್ಸಿಟ್ ಪೋಲ್ ಉಲ್ಲೇಖಿಸಿ ಹೇಳಿದ್ದರು ಎಂದ ಅವರು, ಲೋಕಸಭಾ ಚುನಾವಣೆಯ ಹೆಮ್ಮೆಯ ಫಲಿತಾಂಶಕ್ಕೆ ಪ್ರಧಾನಿ ನರೇಂದ್ರ ಮೋದಿಜೀ, ಅಮಿತ್ ಶಾ ಜೀ, ನಡ್ಡಾಜೀ, ಬಿಜೆಪಿಯ ಕೋಟ್ಯಂತರ ಕಾರ್ಯಕರ್ತರೇ ಕಾರಣ ಎಂದು ವಿಶ್ಲೇಷಿಸಿದರು. ಎಲ್ಲ ಮಹಾಜನತೆಗೆ ಅಭಿನಂದನೆಗಳು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ, ನಿಕಟಪೂರ್ವ ರಾಜ್ಯ ವಕ್ತಾರ ಜಿ.ವಿ. ಕೃಷ್ಣ ಅವರು ಹಾಜರಿದ್ದರು.
BREAKING : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಮನೆ, ತೃಣಮೂಲ ಕಾಂಗ್ರೆಸ್ ಕಚೇರಿ ಮೇಲೆ ಬಾಂಬ್ ದಾಳಿ!