ನವದೆಹಲಿ: ಬಿಸಿಗಾಳಿ ಮತ್ತು ಶೀತ ಅಲೆಗಳನ್ನು ‘ರಾಷ್ಟ್ರೀಯ ವಿಪತ್ತುಗಳು’ ಎಂದು ಘೋಷಿಸುವ ಅವಶ್ಯಕತೆಯಿದೆ ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದೆ. ಬಿಸಿಲಿನ ತಾಪದಿಂದ ಮೃತಪಟ್ಟವರ ಅವಲಂಬಿತರಿಗೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಾಗ ನ್ಯಾಯಾಲಯ ಗುರುವಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಉತ್ತರ ಭಾರತದ ರಾಜ್ಯಗಳಲ್ಲಿ ಬಿಸಿಗಾಳಿ ವಿನಾಶವನ್ನುಂಟುಮಾಡುತ್ತಿದ್ದು, ತಾಪಮಾನವು ಪ್ರತಿದಿನ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ಗಮನ ಹರಿಸಿದ ಹೈಕೋರ್ಟ್, ರಾಜಸ್ಥಾನ ಹವಾಮಾನ ಬದಲಾವಣೆ ಯೋಜನೆಯಡಿ ಸಿದ್ಧಪಡಿಸಿದ ‘ಶಾಖ ಕ್ರಿಯಾ ಯೋಜನೆಯ’ ಪರಿಣಾಮಕಾರಿ ಅನುಷ್ಠಾನಕ್ಕಾಗಿ ತಕ್ಷಣ ಮತ್ತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ವಿವಿಧ ಇಲಾಖೆಗಳ ಸಮಿತಿಗಳನ್ನು ರಚಿಸುವಂತೆ ರಾಜಸ್ಥಾನದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. ಹೀಟ್ ಸ್ಟ್ರೋಕ್ ನಿಂದ ಸಾವನ್ನಪ್ಪಿದವರ ಅವಲಂಬಿತರಿಗೆ ಸೂಕ್ತ ಪರಿಹಾರ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.